ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಯತ್ನ ಹಾಗೂ ಕೊಲೆ ಮಾಡಿದ ಆರೋಪದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾದ ಬಿಹಾರ ಮೂಲದ ರಿತೇಶ್ ಕುಮಾರ್ ಪ್ರಕರಣದ ಸ್ಥಿತಿಗತಿ ವರದಿಯನ್ನು ರಾಜ್ಯ ಸರ್ಕಾರವು ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದೆ.
ಬೆಂಗಳೂರಿನ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ಡಾ. ಮಧು ಭೂಷಣ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠಕ್ಕೆ ಸರ್ಕಾರ ಈ ವರದಿಯನ್ನು ಸಲ್ಲಿಕೆ ಮಾಡಿದೆ.
ವಿಚಾರಣೆ ವೇಳೆ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಸಮಯದ ಕೊರತೆ ಹಿನ್ನೆಲೆಯಲ್ಲಿ ಸ್ಥಿತಿಗತಿ ವರದಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳಂತೆ ಎಲ್ಲ ಅಂಶಗಳನ್ನು ಪಾಲಿಸಲಾಗಿದೆ. ನ್ಯಾಯಾಲಯದ ಆದೇಶ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ನ್ಯಾಯಪೀಠ, ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ, ಸರ್ಕಾರ ವರದಿ ಸಲ್ಲಿಸಿದ್ದು, ಸರ್ಕಾರದ ಪಾತ್ರ ಮುಗಿದಿದೆ. ಇಷ್ಟಾದರೂ ಅರ್ಜಿ ಬಾಕಿ ಉಳಿಸಬೇಕೆಂದರೆ ಉಳಿಸಲಾಗುವುದು ಎಂದು ತಿಳಿಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಮೇಲೆ ಹೈಕೋರ್ಟ್ ನಿಗಾ ಇಡಬೇಕು. ಪಿಯುಸಿಎಲ್ ವರ್ಸಸ್ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿನ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದರು.
ಇದಲ್ಲದೇ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಭಾಗಿಯಾಗಿರುವುದರಿಂದ ಅಂತಿಮ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಅಂಶ ಪರಿಗಣಿಸಿದ ಪೀಠ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಿತು.