ಬೆಳಗಾವಿ: ಕಳೆದ 30 ವರ್ಷಗಳ ಹಿಂದೆ ಇದ್ದ ಕನ್ನಡ-ಮರಾಠಿ ಭಾಷಿಕರ ಸಂಘರ್ಷ ಈಗಿಲ್ಲ. ಸರ್ಕಾರ ಯೋಜನೆ ಮತ್ತು ಕಾರ್ಯಕ್ರಮ ಹಾಕಿಕೊಂಡು ಭಾಷಾ ಸಂಘರ್ಷ ನಿಯಂತ್ರಿಸುವುದೇ ಒಳ್ಳೆಯದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಇಎಸ್ ನಿಷೇಧಿಸುವುದರಿಂದ ವಿವಾದಕ್ಕೆ ಪರಿಹಾರ ಸಿಗಲ್ಲ. ಬ್ಯಾನ್ ಮಾಡಿದರೆ ಮತ್ತೆ ಬೇರೆ ಹೆಸರಿನಲ್ಲಿ ಸಂಘಟನೆ ಹುಟ್ಟುಹಾಕಿ ಸಕ್ರಿಯವಾಗುವ ಸಾಧ್ಯತೆಗಳಿವೆ ಎಂದರು.
ಮಹಾರಾಷ್ಟ್ರ ಸರ್ಕಾರ ಯೋಜನೆಗಳನ್ನು ಘೋಷಿಸಿರಬಹುದು. ಆದರೆ, ಎಲ್ಲರಿಗೂ ಅದರ ಸದುಪಯೋಗ ಸಿಗುವುದಿಲ್ಲ. ಆದರೆ ರಾಜ್ಯ ಸರ್ಕಾರದ ಯೋಜನೆಗಳು ಎಲ್ಲ ಭಾಷಿಕರಿಗೂ ತಲುಪುತ್ತಿವೆ. ಗಡಿ ಭಾಗದಲ್ಲಿ ಹೆಚ್ಚಿನ ನರೇಗಾ ಯೋಜನೆ ನೀಡಲಾಗುತ್ತಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಬೇರೆ ಭಾಷೆಯಲ್ಲಿ ಕಾಗದ ಪತ್ರಗಳಿದ್ದವು, ಆದರೇ ಈಗ ಕನ್ನಡದಲ್ಲಿಯೇ ನೀಡಲಾಗುತ್ತಿದೆ. ಇದರ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.