ಹುಬ್ಬಳ್ಳಿ : ಶಾಸಕರಾದ ಎಸ್ .ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ ಅವರ ಪಕ್ಷ ವಿರೋಧಿ ಧೋರಣೆ, ಪಕ್ಷ ಸಂಘಟನೆಗೆ ಅಸಹಕಾರ ಧೋರಣೆ , ಬೇರೆ ಪಕ್ಷದಲ್ಲಿ ಗುರುತಿಸಿಕೊಳ್ಳುವಂತಹ ಪ್ರಯತ್ನ ಸೇರಿದಂತೆ ಅನೇಕ ಸಂಗತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ವರದಿ ಸಲ್ಲಿಸಲಾಗಿತ್ತು. ಎಚ್ಚರಿಕೆ, ನೋಟಿಸ್ ನಂತರ ಈಗ ವರಿಷ್ಠರು ಕ್ರಮ ಜರುಗಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ತಿಳಿಸಿದ್ದಾರೆ.
ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಅಧಿಕಾರ ಅನುಭವಿಸಿದರು. ಅಧಿಕಾರ ಇಲ್ಲದೇ ಇದ್ದಾಗ ಪಕ್ಷ ಸಂಘಟಿಸಿ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಹುರಿದುಂಬಿಸುವ ಕೆಲಸ ಮಾಡಲಿಲ್ಲ. ಕನಿಷ್ಠ ಪಕ್ಷ ಪಕ್ಷದ ಕಾರ್ಯಕರ್ತರ ಭಾವನೆಗೆ ಸ್ಪಂದಿಸಿರಲಿಲ್ಲ. ಈ ಕುರಿತು ಸಾಕಷ್ಟು ಆಕ್ಷೇಪ, ದೂರು ಬಂದಿದ್ದವು. ಅವೆಲ್ಲ ಪರಿಗಣಿಸಿ ಎಚ್ಚರಿಕೆ ನೀಡಲಾಗಿತ್ತು. ನೋಟಿಸ್ ಕೊಡಲಾಗಿತ್ತು. ಆದರೆ, ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಡ್ರೀಯ ವರಿಷ್ಠರು ಉಭಯ ಶಾಸಕರನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಲಿಂಗರಾಜ ಪಾಟೀಲ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.
ಯಾರೇ ಇರಲಿ ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಪಕ್ಷದ ಘನತೆಗೆ, ಸಂಘಟನೆಗೆ ಧಕ್ಕೆಯಾಗುವಂತಹ ನಿಲುವು ಕಂಉ ಬಂದರೆ ಖಂಡಿತ ಶಿಸ್ತಿನ ಕ್ರಮ ಜರುಗಿಸುತ್ತದೆ ಎಂದು ಹೇಳಿದರು.