ಆತ್ಮನಿರ್ಭರ ಭಾರತ ಸಾಕಾರಕ್ಕೆ ಯುವ ತಂತ್ರಜ್ಞರಿಗೆ ಉತ್ತೇಜನ: ಡಾ.ಅಭಯ ಕರಂದೀಕರ್

0
20

ಕೆಎಲ್ಇ ತಾಂತ್ರಿಕ ವಿವಿ 6 ನೇ ಘಟಿಕೋತ್ಸವ: ಆತ್ಮನಿರ್ಭರ ಭಾರತ ಸಾಕಾರಕ್ಕೆ ಯುವ ತಂತ್ರಜ್ಞರಿಗೆ ಉತ್ತೇಜನ

ಹುಬ್ಬಳ್ಳಿ : ತಂತ್ರಜ್ಞಾನ ಕ್ಷೇತ್ರದ ಯುವ ಪದವೀಧರರು ದೇಶದ ಏಳ್ಗೆಯಲ್ಲಿ ಮುಂಚೂಣಿ ಪಾತ್ರವಹಿಸಬೇಕು. ನವೀನ ಕೌಶಲ್ಯಗಳ ಮೂಲಕ ಸಾಧನೆ ಮಾಡಿ ಪ್ರಧಾನಿಯವರ ಸ್ವಾವಲಂಬಿ ಭಾರತ ( ಆತ್ಮನಿರ್ಭರ ಭಾರತ) ಚಿಂತನೆ ಸಾಕಾರಗೊಳಿಸಬೇಕು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಅಭಯ ಕರಂದೀಕರ್ ಕರೆ ನೀಡಿದರು.

ಇಲ್ಲಿನ ಕೆಎಲ್‌ಇ ತಾಂತ್ರಿಕ ವಿವಿಯ 6ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ತಂತ್ರಜ್ಞಾನ ಪದವಿ ಪಡೆದ ಬಳಿಕ ನಿಮ್ಮದೇ ಸಾಧನೆಯ ಹಾದಿ ರೂಪಿಸಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರವು ಯುವ ತಂತ್ರಜ್ಞಾನ ಪದವೀಧರರಿಗೆ ವಿಫುಲ ಅವಕಾಶ ಕಲ್ಪಿಸಿದೆ. ಸ್ಟಾರ್ಟ್ ಅಪ್ ಆರಂಭಕ್ಕೆ, ಸಂಶೋಧನೆಗೆ ಹೆಚ್ಚಿನ ನೆರವು ಕಲ್ಪಿಸುತ್ತಿದೆ. ಅವಕಾಶಗಳನ್ನು ಬಳಸಿಕೊಳ್ಳಬೇಕು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರವು ಉತ್ಕೃಷ್ಟ ಖಾಸಗಿ ಕಂಪನಿಗಳಿಗೆ ಈ ಕ್ಷೇತ್ರದಲ್ಲಿ ಕೊಡುಗೆ ನೀಡಲು ಉತ್ತೇಜನ ನೀಡುತ್ತಿದೆ. ನೀವು ಪಡೆದ ತಾಂತ್ರಿಕ ಜ್ಞಾನದಿಂದ ಈ ಜಗತ್ತಿಗೆ ಏನಾದರೂ ಹೊಸದನ್ನೇ ಕೊಡಲು ಪ್ರಯತ್ನಿಸಿ. ಉದಾಹರಣೆಗೆ ಅರವಿಂದ ಮೆಳ್ಳಿಗೇರಿ ಅವರ ಸಾಧನೆಯನ್ನು ನೀವು ಗಮನಿಸಬಹುದು. ಅವಕಾಶಕ್ಕಾಗಿ ಕಾಯದೇ ನೀವೇ ಬೇರೊಬ್ಬರಿಗೆ ಉದ್ಯೋಗ ಕಲ್ಪಿಸುವಂತವರಾಗಬೇಕು, ಮಹಿಳೆಯರಿಗೆ ಶಿಕ್ಷಣ ಮತ್ತು ಅವಕಾಶಗಳು ಇನ್ನೂ ಹೆಚ್ಚಿನ ರೀತಿ ಲಭಿಸಬೇಕು. ಸಮಾಜ, ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆ ಹೆಚ್ಚಿನದಾಗಿದೆ ಎಂದು ಹೇಳಿದರು.

ಅಂಕಗಳು ಕಡಿಮೆ ಬಂದಾಕ್ಷಣ ಎದೆಗುಂದಬಾರದು: ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಉದ್ಯಮಿ, ಮಾಜಿ ಸಚಿವ ಹಾಗೂ ಬಿವಿಬಿ ಕಾಲೇಜಿನ ಹಳೆಯ ವಿದ್ಯಾರ್ಥಿ ಮುರುಗೇಶ ನಿರಾಣಿಯವರು, ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಒಂದಿಲ್ಲೊಂದು ಸಾಧನೆ ಮಾಡುವವರೆ. ಸಂಸ್ಥೆ ಕಟ್ಟಲು ಹಿರಿಯರು ವಹಿಸಿದ ಪರಿಶ್ರಮ ಗಣನೀಯ. ಡಾ.ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಈ ಸಂಸ್ಥೆ ದೇಶ, ವಿದೇಶದಲ್ಲಿ ಹೆಗ್ಗಳಿಕೆ ಗಳಿಸಿದೆ. ವ್ಯಾಪಕ ವಿಸ್ತಾರಗೊಂಡಿದೆ ಎಂದರು. ಅಂಕಗಳು ಕಡಿಮೆ ಬಂದಾಕ್ಷಣ ಎದೆಗುಂದಬಾರದು. ನಾನು ಸರ್ಕಾರಿ ಶಾಲೆಯಲ್ಲಿ ಕಲಿತು. ಇದೇ ಬಿವಿಬಿ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದೆ. ನಾನೇನು ರ್ಯಾಂಕ್ ಸ್ಟೂಡೆಂಟ್ ಅಲ್ಲ. ಆದರೆ ಪದವಿ ಪಡೆದ ಬಳಿಕ ನೌಕರಿಗಾಗಿ ಕಾಯಲಿಲ್ಲ. ನನ್ನದೇ ಆದ ಮಾರ್ಗ ಕಂಡುಕೊಂಡೆ. ಇಲ್ಲಿ ಪಡೆದ ಜ್ಞಾನ ಸಾಧನೆ ಮಾರ್ಗ ತೋರಿತು. ಈಗ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುತ್ತೇದ್ದೇನೆ, ನೀವು ಉದ್ಯೋಗಕ್ಕಾಗಿ ಕಾಯದೇ ಉದ್ಯಮಿಗಳಾಗಿ. ಬಂಡವಾಳಕ್ಕಿಂತ ನಿಮ್ಮ ಆಸಕ್ತಿ, ಗುರಿ ಮುಖ್ಯ ಎಂದು ನಿರಾಣಿ ಹೇಳಿದರು.

ಏಕಸ್ ಸಂಸ್ಥೆಯ ಸಿಇಒ ಅರವಿಂದ ಮೆಳ್ಳಿಗೇರಿ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 1367 ಸ್ನಾತಕ, 293 ಸ್ನಾತಕೋತ್ತರ ಹಾಗೂ 17 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಸಹ ಕುಲಾಧಿಪತಿ ಡಾ.ಅಶೋಕ ಶೆಟ್ಟರ, ಕುಲಪತಿ ಡಾ. ಪ್ರಕಾಶ ತೆವರಿ ಜಾಗೂ ವಿವಿಧ ವಿಭಾಗಗಳ ಡೀನ್ ಗಳು ವೇದಿಕೆಯಲ್ಲಿದ್ದರು.

Previous articleಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ
Next articleಲೋಕಾಯುಕ್ತ ವರದಿ ಸಾಕ್ಷಿ ಹೇಳುತ್ತಿದೆ…