ಬೆಳಗಾವಿ: ಉದ್ದೇಶಪೂರ್ವಕವಾಗಿ ಯಾರಾದ್ರೂ ಲಾಠಿಚಾರ್ಜ್ ಮಾಡ್ತಾರಾ? ಯಾವುದೇ ಸರ್ಕಾರವೂ ಅಂತಹ ಕ್ರಮ ಕೈಗೊಳ್ಳುವುದಿಲ್ಲ ಎಂದು ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಕಿಡಿಕಾರಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ೨ಎ ಮೀಸಲಾತಿ ಸಿಕ್ಕಿಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಬಸವಮೃತ್ಯುಂಜಯ ಸ್ವಾಮೀಜಿಯವರ ಆಕ್ರೋಶ ಸಹಜವಾಗಿದೆ. ಆದರೆ ಬಿಜೆಪಿ ಸರ್ಕಾರ ಇರಲಿ-ಕಾಂಗ್ರೆಸ್ ಸರ್ಕಾರ ಇರಲಿ ಹಾಗೆಲ್ಲಾ ಲಾಠಿ ಚಾರ್ಜ್ ಮಾಡಲ್ಲ. ಬಿಜೆಪಿಯವರು ಹೀಗೆಲ್ಲಾ ಹೇಳಿ ದಾರಿ ತಪ್ಪಿಸಬಾರದು. ಹಾಗೆ ಲಾಠಿ ಚಾರ್ಜ್ ಮಾಡಿಸುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬುದು ಬಿಟ್ರೆ ಏನ್ ಸಿಗುತ್ತೆ ನೀವೇ ಹೇಳಿ ಎಂದು ಪತ್ರಕರ್ತರಿಗೆ ಮರುಸವಾಲು ಹಾಕಿದರು.
ಕೇಂದ್ರದಲ್ಲಿ ಅದೆಷ್ಟೋ ರೈತರು ಸಾವನ್ನಪ್ಪಿದ್ದಾರೆ ಅವರ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಸುಮ್ಮನೆ ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಹೋಗಬಾರದು ಎಂದು ಹೇಳಿದರು.