ಡೆಹ್ರಾಡೂನ್: ಉತ್ತರಾಖಂಡ್ನಲ್ಲಿ ಭಾರೀ ಹಿಮಪಾತದಿಂದಾಗಿ 57ಕ್ಕೂ ಹೆಚ್ಚು ಕಾರ್ಮಿಕರು ಹಿಮದಡಿಯಲ್ಲಿ ಸಿಲುಕಿದ ಘಟನೆ ನಡೆದಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ ಶುಕ್ರವಾರ ನಡೆದ ಹಿಮಪಾತದಲ್ಲಿ ಅವಶೇಷಗಳಡಿ ಸಿಲುಕಿದ 55 ಕಾರ್ಮಿಕರಲ್ಲಿ 47 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇನ್ನುಳಿದ 8 ಮಂದಿಯ ರಕ್ಷಣೆಗೆ ಭಾರತೀಯ ಸೇನೆ ಸೇರಿದಂತೆ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಭಾರತೀಯ ಸೇನೆಯು 14 ಕಾರ್ಮಿಕರನ್ನು ರಕ್ಷಿಸಿದೆ. ಅವರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ಗಳ ಮೂಲಕ ರವಾನಿಸಲಾಗಿದೆ. ಶುಕ್ರವಾರ ರಕ್ಷಣಾ ತಂಡ 33 ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು. ರಾತ್ರಿಯಾಗುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂದುವರಿದ ಕಾರ್ಯಾಚರಣೆಯಲ್ಲಿ ಹಿಮದಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮೋದಿಯಿಂದ ಅಗತ್ಯ ನೆರವಿನ ಭರವಸೆ : ಹಿಮಪಾತ ಕುರಿತಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಜೊತೆಗೆ ಅಗತ್ಯ ನೆರವಿನ ಭರವಸೆಯನ್ನೂ ನೀಡಿದ್ದಾರೆ.