ಉಡುಪಿ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

ಸಂ.ಕ. ಸಮಾಚಾರ, ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೊದಲ ಮಳೆಗೇ ಉಡುಪಿ, ಮಣಿಪಾಲದ ರಸ್ತೆಗಳು ಹದಗೆಟ್ಟಿದ್ದು, ಮಳೆ ನೀರು ಹರಿಯುವ ತೋಡುಗಳಾಗಿ ಪರಿವರ್ತನೆಗೊಂಡವು. ಮಲ್ಪೆ- ಮೊಣಕಾಲ್ಮೂರು ಹೆದ್ದಾರಿಯ ಮಣಿಪಾಲದಲ್ಲಿ ಕಲ್ಲು ಮಣ್ಣು ಕೊಚ್ಚಿಕೊಂಡು ಹೋಗಿ ವಾಹನ ಸಂಚಾರ ದುಸ್ತರವಾಗಿತ್ತು. ಲಕ್ಷ್ಮೀಂದ್ರನಗರದ ರಸ್ತೆಗಳು ಕೆಸರುಮಯವಾಗಿದೆ. ನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ತಗ್ಗುಪ್ರದೇಶಗಳು ಜಲಾವೃತವಾಗಿವೆ. ಮಳೆಯೊಂದಿಗೆ ವೇಗದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿ ಬೆಳಗ್ಗಿನಿಂದಲೇ ವಿದ್ಯುತ್ ವ್ಯತ್ಯಯವುಂಟಾಗಿದೆ. ಬುಧವಾರವೂ ಭಾರೀ ಮಳೆಯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.