ಬೆಳಗಾವಿ: ದೇಶದ ಮೇಲೆ ದಾಳಿ ಆದಾಗ ಬಿಜೆಪಿ ಸರ್ಕಾರವೇ ಏಕೆ ಇರುತ್ತದೆ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಹೇಳಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕ್ ಉಗ್ರರಿಂದ ಐಸಿ ೮೧೪ ವಿಮಾನ ಹೈಜಾಕ್ ಮಾಡಿ ಕಂದಹಾರ ತೆಗೆದುಕೊಂಡು ಹೋದಾಗ ಮೌಲಾನಾ ಮಸೂದ್ ಅಝರ್ ಸೇರಿದಂತೆ ಎಲ್ಲ ಉಗ್ರರನ್ನು ಅತಿಥಿಗಳಂತೆ ಬೀಳ್ಕೊಡುಗೆ ಮಾಡಲಾಯಿತು. ಈ ಬಗ್ಗೆ ಬಿಜೆಪಿಯ ನಾಯಕರು ಉತ್ತರಿಸುತ್ತಾರಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯ ದುರ್ಬಲ ಸರ್ಕಾರ ಸಂಸತ್ ಮೇಲೆ ಮತ್ತು ಪಠಾಣ್‌ಕೋಟ್ ಏರ್‌ಬೇಸ್ ಮೇಲೆ ಉಗ್ರರ ದಾಳಿ ಆಯಿತು. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದರು. ಉರಿ ಆರ್ಮಿ ಬೇಸ್ ಮೇಲೆಯೂ ಉಗ್ರರ ದಾಳಿ ನಡೆಯಿತು. ಪುಲ್ವಾಮಾದಲ್ಲಿ ನಮ್ಮ ಸೇನಾ ವಾಹನ ಮೇಲೆ ಉಗ್ರರು ದಾಳಿ ಮಾಡಿದರು. ಈ ವೇಳೆ ಪ್ರದಾನಿ ನರೇಂದ್ರ ಮೋದಿ ಫಿಲ್ಮ್ ಶೂಟಿಂಗ್ ಮಾಡುತ್ತಿದ್ದರು ಎಂದು ಅವರು ಹರಿಹಾಯ್ದರು.
ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪಹಲ್ಗಾಮ್‌ನಲ್ಲಿ ಕರ್ನಾಟಕದ ಮೂವರು ಸೇರಿ ದೇಶದ 26 ಜನ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕೆ ಕಾರಣ ಏನು ಮೋದಿಜಿ ಎಂದು ಕೇಳಿದರು. ಅಂದರೆ ಯಾವಾಗ ಯಾವಾಗ ಬಿಜೆಪಿ ಸರ್ಕಾರ ಇರುತ್ತದೆ ಆಗ ಉಗ್ರರ ದಾಳಿ ಆಗುತ್ತದೆ. ಸರ್ಕಾರ ಮಲಗಿರುತ್ತದೆ ಎಂದು ಅವರು ವಿವರಿಸಿದರು.