ಹುಬ್ಬಳ್ಳಿ: ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿರುವ ಟಿಪ್ಪು ಸುಲ್ತಾನ್ ವಂಶಸ್ಥ ಸೈಯ್ಯದ್ ಮನ್ಸೂರ್‌ಅಲಿ ಟಿಪ್ಪು ಸುಲ್ತಾನ್, ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಉಗ್ರವಾದಿಗಳನ್ನು ಜೀವಂತವಾಗಿ ಸುಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆ, ನಿಂದನೆ ಮಾಡಬಾರದು ಎಂದು ಕುರಾನ್ ಹೇಳುತ್ತದೆ. ಅಂತೆಯೇ ಮುಸಲ್ಮಾನರು ನಡೆದುಕೊಳ್ಳುತ್ತಾರೆ. ಕುರಾನ್ ವಿರುದ್ಧವಾಗಿ ನಡೆದುಕೊಳ್ಳುವವರು ಎಂದಿಗೂ ಮುಸಲ್ಮಾನರಾಗಲು ಸಾಧ್ಯವಿಲ್ಲ. ಹೀಗಾಗಿ, ನಮ್ಮ ಸಮುದಾಯಕ್ಕೂ ಉಗ್ರರಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಪೆಹಲ್ಗಾಮ್ ದುರ್ಘಟನೆಯಲ್ಲಿ ಸ್ಥಳೀಯ ಮುಸಲ್ಮಾನರು ಅನೇಕ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ. ಆದರೆ, ಇದೀಗ ಕೆಲವರು ಈ ಘಟನೆಯನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯಗಳಿಗೆ ನಾನು ಬದ್ಧವಾಗಿದ್ದೇನೆ. ಸರ್ಕಾರದ ಜೊತೆಗೆ ನಾನಿದ್ದೇನೆ. ಒಂದು ವೇಳೆ ಯುದ್ಧವಾದಲ್ಲಿ ನಾನು ಕೂಡಾ ಯುದ್ಧಭೂಮಿಗೆ ತೆರಳಿ ಹೋರಾಟ ಮಾಡಲು ಸಿದ್ಧ ಎಂದು ಹೇಳಿದರು.
ನಮ್ಮ ತಾತನ (ಟಿಪ್ಪು ಸುಲ್ತಾನ್) ಹೆಸರು ಹೇಳಿಕೊಂಡು ರಾಜ್ಯದಲ್ಲಿ ಅನೇಕರು ರಾಜಕೀಯ ಮಾಡಿ, ಶಾಸಕರು, ಸಚಿವರು ಆಗಿದ್ದಾರೆ. ಆದರೆ, ಈವರೆಗೆ ಟಿಪ್ಪು ಸುಲ್ತಾನ್ ಕುಟುಂಬ ಹೇಗಿದೆ ಎಂಬ ಬಗ್ಗೆ ಕಾಳಜಿ ಇಲ್ಲ. ಟಿಪ್ಪು ಸುಲ್ತಾನ್ ವಕ್ಫ್‌ಗೆ ೬೦೦ ಎಕರೆ ಭೂಮಿ ಕೊಟ್ಟಿದ್ದಾರೆ. ಆದರೆ, ಅದನ್ನೇ ರಾಜಕಾರಣಿಗಳು ಎನ್‌ಓಸಿ ಮಾಡಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಸಮಾಧಿ, ಗುಂಬಜ್ ರಕ್ಷಣೆ ಮಾಡಬೇಕು ಎಂದರು.