ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುನಿಸಿನ ವಿಚಾರದಲ್ಲಿ ಎಲ್ಲವೂ ಸರಿಯಾಗುತ್ತದೆ. ಸರಿಪಡಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ. ಅವರು ರಾಜ್ಯಾದ್ಯಂತ ಸೈಕಲ್‌ನಲ್ಲಿ ಸುತ್ತಾಡಿ ಕಟ್ಟಿದ ಫಲವಾಗಿ ಪಕ್ಷ ರಾಜ್ಯದಲ್ಲಿ ಇಂದು ಬಲಿಷ್ಠವಾಗಿದೆ. ಯಡಿಯೂರಪ್ಪ ಪಕ್ಷದ ಕುತ್ತಿಗೆ ಹಿಸುಕಿದ್ದಾರೋ ಇಲ್ಲ, ಎತ್ತರಕ್ಕೆ ಬೆಳೆಸಿದ್ದಾರೋ ಎಂಬುದು ಚುನಾವಣೆ ಮುಗಿದ ಮೇಲೆ ಗೊತ್ತಾಗುತ್ತದೆ ಎಂದರು.
ಸಾಮೂಹಿಕವಾಗಿ ಚರ್ಚೆ ಮಾಡಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲುವ ಅವಕಾಶ ಹೆಚ್ಚಿರುವುದರಿಂದ ಸಮಸ್ಯೆಗಳು, ಗೊಂದಲ ಸಹಜ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಸಮಸ್ಯೆ ಯಾಕಿಲ್ಲ ಎಂದರೆ ಅಲ್ಲಿ ಹೋದರೆ ಠೇವಣಿ ಸಿಗೋದಿಲ್ಲ ಎನ್ನುವುದು ಗೊತ್ತಿದೆ. ಅದಕ್ಕೆ ಸಮಸ್ಯೆ ಇಲ್ಲ ಎಂದರು. ಕೋಲಾರ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡುವ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

























