ಇ-ಕಾಮರ್ಸ್ಗಳೊಂದಿಗೆ ನಾಳೆ ಉನ್ನತ ಮಟ್ಟದ ಸಭೆ

0
22

ನವದೆಹಲಿ: ಇ ಕಾಮರ್ಸ್ ವೇದಿಕೆಗಳಲ್ಲಿ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಪ್ರಮುಖ ೧೩ ಕರಾಳ ಮಾದರಿ (ಡಾರ್ಕ್ ಪ್ಯಾಟರ್ನ್)ಗಳನ್ನು ಗುರುತಿಸಿದ್ದು, ಈ ಕುರಿತು ಪರಿಹಾರ ಕ್ರಮಕ್ಕಾಗಿ ಚರ್ಚಿಸಲು ದೆಹಲಿಯಲ್ಲಿ ಮೇ ೨೮ರಂದು ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಇ ಕಾಮರ್ಸ್ ವೇದಿಕೆಗಳಲ್ಲಿನ ವ್ಯಾಪಾರ-ವಹಿವಾಟುಗಳ ಬಗ್ಗೆ ವಿವಿಧ ರೀತಿಯ ದೂರುಗಳು ಬರುತ್ತಿವೆ. ಕೆವವೊಂದು ಕರಾಳ ಮಾದರಿ(ಡಾರ್ಕ್ ಪ್ಯಾಟರ್ನ್)ಗಳ ಬಗ್ಗೆ ಗ್ರಾಹಕರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಹಾಗಾಗಿ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆಹಾರ, ಪ್ರಯಾಣ, ಸೌಂದರ್ಯ ವರ್ಧಕಗಳು, ಔಷಧಾಲಯ, ಚಿಲ್ಲರೆ ವ್ಯಾಪಾರ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿನ ಪ್ರಮುಖ ಇ-ಕಾಮರ್ಸ್ ವೇದಿಕೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್, ೧mg.ಛಿom, ಆಪಲ್, ಬಿಗ್‌ಬಾಸ್ಕೆಟ್, ಮಿಶೋ, ಮೆಟಾ, ಮೇಕ್ ಮೈಟ್ರಿಪ್, ಪೇಟಿಎಂ, ಓಲಾ, ರಿಲಯನ್ಸ್ ರಿಟೇಲ್ ಲಿಮಿಟೆಡ್, ಸ್ವಿಗ್ಗಿ, ಜೊಮಾಟೊ, ಯಾತ್ರಾ, ಉಬರ್, ಟಾಟಾ, ಈಸ್‌ಮೈಟ್ರಿಪ್, ಕ್ಲಿಯರ್ ಟ್ರಿಪ್, ಇಂಡಿಯಾ ಮಾರ್ಟ್, ಇಂಡಿಗೊ ಏರ್‌ಲೈನ್ಸ್, ಕ್ಸಿಗೊ, ಜಸ್ಟೀಸ್ ಡಿಯಲ್, ಮೆಡಿಕಾ ಬಜಾರ್, ನೆಟ್‌ಮೆಡ್ಸ್, ಒಎನ್‌ಡಿಸಿ, ಥಾಮಸ್ ಕುಕ್ ಮತ್ತು ವಾಟ್ಸಾಪ್ ಗ್ರಾಹಕರ ಹಕ್ಕುಗಳ ರಕ್ಷಣೆ, ವ್ಯಾಪಾರದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹ ಮಾರುಕಟ್ಟೆ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಜೋಶಿ ಹೇಳಿದ್ದಾರೆ.
ಪ್ರಮುಖ ಕೈಗಾರಿಕಾ ಸಂಸ್ಥೆಗಳು, ಸ್ವಯಂ ಸೇವಾ ಗ್ರಾಹಕ ಸಂಸ್ಥೆಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಉನ್ನತ ಮಟ್ಟದ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದು, ಪಾರದರ್ಶಕ ವಹಿವಾಟು ಹಾಗೂ ಕರಾಳ ಮಾದರಿಗಳ ಬಗ್ಗೆ ಗ್ರಾಹಕರಲ್ಲಿರುವ ಕಳವಳ ನಿವಾರಣೆ, ಸಂಶೋಧನೆ, ನಿಯಂತ್ರಣ ಮತ್ತು ಪರಿಹಾರ ಕ್ರಮ ರೂಪಿಸುವ ನಿಟ್ಟಿನಲ್ಲಿ ಅಮೂಲ್ಯ ಸಲಹೆ, ಮಾರ್ಗದರ್ಶನ ನೀಡಲಿವೆ ಎಂದಿದ್ದಾರೆ.

ಇ ಕಾಮರ್ಸ್ ಸಂಸ್ಥೆಗಳಲ್ಲಿ ಗ್ರಾಹಕರ ದಾರಿ ತಪ್ಪಿಸುವ ಹಾಗೂ ಅನಪೇಕ್ಷಿತ ಆಯ್ಕೆಗಳನ್ನು ಮಾಡುವಂತೆ ಸೆಳೆಯುವ ‘ಡಾರ್ಕ್ ಪ್ಯಾಟರ್ನ್’ಗಳ ಅನ್ಯಾಯದ ವ್ಯಾಪಾರ ಪದ್ಧತಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ಇಲಾಖೆ ತ್ವರಿತ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಡಾರ್ಕ್ ಪ್ಯಾಟರ್ನ್ಗಳನ್ನು ಎದುರಿಸಲು ಇಲಾಖೆ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಕೇಂದ್ರ ಗ್ರಾಹಕ ಇಲಾಖೆ ೨೦೨೩ರ ನವೆಂಬರ್ ೩೦ರಂದು ಡಾರ್ಕ್ ಪ್ಯಾಟರ್ನ್ಗಳ ತಡೆಗಟ್ಟುವಿಕೆ ಕುರಿತು ಸಮಗ್ರ ಮಾರ್ಗಸೂಚಿ ಹೊರಡಿಸಿದೆ. ಇ ಕಾಮರ್ಸ್ ವೇದಿಕೆಗಳಲ್ಲಿ ಪ್ರಮುಖವಾಗಿ ೧೩ ವಿಧದ ಡಾರ್ಕ್ ಪ್ಯಾಟರ್ನ್ಗಳನ್ನು ಗುರುತಿಸಿದ್ದು, ಫಾಲ್ಸ್ ಅರ್ಜೆನ್ಸಿ, ಬಾಸ್ಕೆಟ್ ಸ್ನೀಕಿಂಗ್, ಕನ್ಫರ್ಮ್ ಶೇಮಿಂಗ್, ಫೋರ್ಸ್ಡ್ ಆಕ್ಷನ್, ಸಬ್‌ಸ್ಕ್ರಿಪ್ಷನ್ ಟ್ರಾಪ್, ಇಂಟರ್‌ಫೇಸ್ ಹಸ್ತಕ್ಷೇಪ, ಬೈಟ್ ಮತ್ತು ಸ್ವಿಚ್, ಡ್ರಿಪ್ ಪ್ರೈಸಿಂಗ್, ಡಿಸ್ಗೈಸ್ಡ್ ಜಾಹೀರಾತು, ನಗ್ಗಿಂಗ್, ಟ್ರಿಕ್ ಪ್ರಶ್ನೆ, ಸಾಸ್ ಬಿಲ್ಲಿಂಗ್ ಮತ್ತು ರೋಗ್ ಮಾಲ್‌ವೇರ್‌ಗಳು ಒಳಗೊಂಡಿವೆ. ಈ ಎಲ್ಲವೂಗಳ ಬಗ್ಗೆಯೂ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಮತ್ತಷ್ಟು ಕಟ್ಟುನಿಟ್ಟಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Previous articleದ.ಕನ್ನಡ ಜಿಲ್ಲೆ:  ಐದು ತಾಲೂಕುಗಳಲ್ಲಿ ಮೂರು ದಿನ ನಿಷೇಧಾಜ್ಞೆ
Next articleಆಂಧ್ರಪ್ರದೇಶದಲ್ಲಿ ಬಿಐಎಸ್ ೯ನೇ ಆಡಳಿತ ಮಂಡಳಿ ಸಭೆ: ಪ್ರತಿ ಜಿಲ್ಲೆಗೂ ಬಿಐಎಸ್ ಸೌಲಭ್ಯಕ್ಕೆ ಪ್ರಯತ್ನ