ಇಸ್ಲಾಂಗೆ ಮತಾಂತರಕ್ಕೆ ಯತ್ನ: ಲವ್ ಜಿಹಾದ್‌ನ ಕರಾಳ ಮುಖ ಬಯಲು

0
16

ಬೆಳಗಾವಿ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್‌ಗೆ ಕಾಲೇಜು ಯುವತಿ ಬಲಿಯಾದ ಪ್ರಕರಣದ ಕಿಚ್ಚು ರಾಜ್ಯವ್ಯಾಪಿ ವ್ಯಾಪಿಸಿದ ಬೆನ್ನ ಹಿಂದೆಯೇ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಅದೇ ಲವ್ ಜಿಹಾದ್‌ನ ಮತ್ತೊಂದು ಕರಾಳ ಮುಖ ಬೆಳಕಿಗೆ ಬಂದಿದೆ.
ಇಲ್ಲಿ ಹಿಂದೂ ಯುವತಿಯರನ್ನು ಅಷ್ಟೇ ಅಲ್ಲ ವಿವಾಹಿತೆಯರಿಗೆ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸುತ್ತಿರುವ ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಗಮನಿಸಬೇಕಾದ ಸಂಗತಿ ಎಂದರೆ, ಹುಬ್ಬಳ್ಳಿಯ ನೇಹಾ ಹಿರೇಮಠಳ ಹತ್ಯೆ ಮಾಡಿದವನು ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದವನು. ಆದರೆ ಇಲ್ಲಿ ವಿವಾಹಿತೆಯನ್ನು ಮತಾಂತರಕ್ಕೆ ಯತ್ನಿಸಿದವನು ಸಹ ಅದೇ ಊರಿನವನು.
ಈಗ ಬೆಳಿಕಿಗೆ ಬಂದಿರುವುದು ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಪೀಡಿಸಿದ ಪ್ರಕರಣ. ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರಲ್ಲಿ ಆರೋಪಿಗಳು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ ಇಸ್ಲಾಂಗೆ ಮತಾಂತರ ಆಗುವಂತೆ ಪೀಡಿಸಿದರು ಎಂದು ಹೇಳಲಾಗಿದೆ.
ಆಗಿದ್ದು ಏನು…?
ಕೆಲಸ ಕೊಡಿಸುತ್ತೇನೆಂದು ಹೇಳಿ ಹಿಂದೂ ವಿವಾಹಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಬಲವಂತವಾಗಿ ಮತಾಂತರ ಮಾಡಲು ಆರೋಪಿಗಳು ಯತ್ನಿಸಿದ್ದರು ಎನ್ನಲಾಗಿದೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಆರೀಫ್ ಮತ್ತು ಆತನ ಪತ್ನಿ ಬಂಧಿತ ಆರೋಪಿಗಳಾಗಿದ್ದಾರೆ.
ಸಂತ್ರಸ್ತ ಮಹಿಳೆಯ ಪತಿಯದ್ದು ಮುನವಳ್ಳಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ಇದೆ. ಇಲ್ಲಿ ಪತಿ ಇಲ್ಲದಿದ್ದಾಗ ಸಂತ್ರಸ್ತೆ ಕಿರಾಣಿ ಅಂಗಡಿಯಲ್ಲಿ ಕುಳಿತು ವ್ಯಾಪಾರ ವಹಿವಾಟು ನಡೆಸುತ್ತಿದ್ದಳು.
ಈ ವಿಚಾರ ತಿಳಿದ ಆರೋಪಿ ಆರೀಫ್ ಬೇಪಾರಿ ನೆರೆ ಮನೆಯವರೆಂದು ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ.
ಬಳಿಕ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಲೈಂಗಿಕ ದೌರ್ಜನ್ಯದ ಮತ್ತು ಮಹಿಳೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದು `ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳಬೇಕು. ಇಲ್ಲದಿದ್ದರೆ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡುತ್ತೇವೆ ಎಂದು ಆರೀಫ್ ಮತ್ತು ಇನ್ನಿತರ ಐವರು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಸಂತ್ರಸ್ತೆಗೆ ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸಿ ಐದು ಸಲ ನಮಾಜ್ ಮಾಡಬೇಕು ಎಂದು ಪೀಡಿಸಿದ್ದಾರೆ. ಅಲ್ಲದೆ ಒತ್ತಾಯ ಪೂರ್ವಕವಾಗಿ ಮಹಿಳೆಗೆ ಬುರ್ಖಾ ಧಾರಣೆ ಮಾಡಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ಸಂತ್ರಸ್ತ ಮಹಿಳೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುನವಳ್ಳಿ ಪಟ್ಟಣದ ಆರೀಫ್ ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

Previous articleವಾಣಿಜ್ಯ ನಗರಿ ಹುಬ್ಬಳ್ಳಿಗೆ ಜೆಪಿ ನಡ್ಡಾ
Next articleಚುನಾವಣೆ ಬಳಿಕ ವಿಧಾನಸಭೆ ವಿಸರ್ಜನೆ