ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನಿಧನ

ಬೆಂಗಳೂರು: ಇಸ್ರೊ ಮಾಜಿ ಅಧ್ಯಕ್ಷ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್ಇಪಿ) ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕೆ. ಕಸ್ತೂರಿ ರಂಗನ್ (84 ) ನಿಧನರಾಗಿದ್ದಾರೆ.
ಕಸ್ತೂರಿ ರಂಗನ್‌ ಅವರು 1940 ಅಕ್ಟೋಬರ್‌ 24ರಂದು ಎರ್ನಾಕುಳಂನಲ್ಲಿ ಜನಿಸಿರು ಅವರು, ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಸುದೀರ್ಘ 9ವರ್ಷಕ್ಕೂ ಅಧಿಕ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ರಾಜ್ಯಸಭೆಯ ಸದಸ್ಯರಾಗಿ(2003–09), ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದರು. 2004ರ ಎಪ್ರಿಲ್ ನಿಂದ 2009ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು, ಅನೇಕ ರಾಕೆಟ್‌ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಕಸ್ತೂರಿ ರಂಗನ್ ಅವರ ಸಾಧನೆಯನ್ನು ಗುರುತಿಸಿದ್ದ ಭಾರತ ಸರ್ಕಾರ ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ನೀಡಿ ಗೌರವಿಸಿದೆ.