ಇಸ್ರೋ ಅದ್ವಿತೀಯ ಸಾಧನೆ

0
22

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಗತ್ತಿನ ಅತ್ಯುತ್ತಮ ಸಂಶೋಧನಾ ಸಂಸ್ಥೆಗಳಲ್ಲೊಂದು. ಇದು ಕೈಗೊಳ್ಳದ ಪ್ರಯೋಗಗಳೇ ಇಲ್ಲ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಿಯೇ ನಮ್ಮ ವಿಜ್ಞಾನಿಗಳು ಎಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ. ಅಮೆರಿಕದ `ನಾಸಾ’ ಸಂಸ್ಥೆಯನ್ನೂ ಮೀರಿಸುವ ಸಾಮರ್ಥ್ಯವನ್ನು ಈ ಸಂಸ್ಥೆ ಹೊಂದಿದೆ ಎನ್ನುವುದು ಅತಿಶಯೋಕ್ತಿ ಏನಲ್ಲ. ವಿದೇಶಿ ಬಾಹ್ಯಾಕಾಶ ವಿಜ್ಞಾನಿಗಳು ಇಲ್ಲಿ ಬಂದು ತರಬೇತಿ ಪಡೆದು ಹೋಗುತ್ತಿದ್ದಾರೆ. ೧೯೬೨ರಲ್ಲಿ ಆರಂಭಗೊಂಡ ಈ ಸಂಸ್ಥೆ ಇದುವರೆಗೆ ೧೨೫ ಬಾರಿ ರಾಕೆಟ್ ಉಡಾವಣೆ ಮಾಡಿದೆ. ಒಮ್ಮೆ ೧೦೪ ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ಸ್ಥಾಪಿಸಿದೆ. ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಸ್ಥಾಪಿಸಿರುವುದು ಲೆಕ್ಕಕ್ಕಿಲ್ಲ. ನಾಸಾಗೆ ಹೋಲಿಸಿದರೆ ಇಸ್ರೋ ಉಡಾವಣೆ ವೆಚ್ಚ ಬಹಳ ಕಡಿಮೆ. ಅದರಿಂದ ಸಣ್ಣ ಸಣ್ಣ ದೇಶಗಳೂ ಟೆಲಿ ಸಂಪರ್ಕ ಹೊಂದಲು ತಮ್ಮದೇ ಆದ ಉಪಗ್ರಹ ಹೊಂದಲು ಈಗ ಸಾಧ್ಯವಾಗಿದೆ. ಅಮೆರಿಕ, ರಷ್ಯಾ, ಕೆನಡ ಉಡಾವಣೆ ಕೇಂದ್ರಗಳು ಬೇರೆ ದೇಶಗಳಿಗೆ ದುಬಾರಿ. ಉಳಿದ ದೇಶಗಳು ಭಾರತದತ್ತ ತಿರುಗಿ ನೋಡುವುದು ಸಹಜ. ನಮ್ಮ ದೇಶದಲ್ಲಿ ದೂರ ಸಂಪರ್ಕ ಉತ್ತಮಗೊಳ್ಳಲು ಇಸ್ರೋ ಕಾರಣ ಎಂದು ಹೇಳುವ ಅಗತ್ಯವಿಲ್ಲ. ಮೊಬೈಲ್ ಸೇವೆ ಬೃಹದಾಕಾರವಾಗಿ ಬೆಳೆಯಲು ಇಸ್ರೋ ಬಾಹ್ಯಾಕಾಶದಲ್ಲಿ ಸ್ಥಾಪಿಸಿರುವ ಉಪಗ್ರಹಗಳು ಕಾರಣ. ಪ್ರತಿ ಉಪಗ್ರಹದ ಆಯಸ್ಸು ೧೦ ವರ್ಷ. ಅಷ್ಟರಲ್ಲಿ ಅದರ ಕೆಲಸವನ್ನು ಮುಂದುವರಿಸಲು ಮತ್ತೊಂದು ಉಪಗ್ರಹ ಸಿದ್ಧವಾಗಿರಬೇಕು. ಈಗ ಉಪಗ್ರಹದ ಸಹಾಯವಿಲ್ಲದೆ ಏನೂ ನಡೆಯುವುದಿಲ್ಲ ಎಂಬ ಪರಿಸ್ಥಿತಿ ಬಂದಿದೆ. ದೂರ ಸಂಪರ್ಕ, ದೂರದರ್ಶನ, ಹವಾಮಾನ, ನೈಸರ್ಗಿಕ ವಿಕೋಪ, ಭೂಮಿಯ ವಿವರ, ಬಾಹ್ಯಾಕಾಶ ಸಂಶೋಧನೆ, ಖಭೌತ ವಿಜ್ಞಾನ, ನೌಕಾದಳ, ನಾಗರಿಕ ವಿಮಾನಯಾನ, ಕೃಷಿ, ಟೆಲಿ ಮೆಡಿಸಿನ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಸ್ರೋ ಕೊಡುಗೆ ಇದ್ದೇ ಇದೆ. ಇತ್ತೀಚೆಗೆ ಮಿಲಿಟರಿ ಕಾರ್ಯಾಚರಣೆಯಲ್ಲಿ ಉಪಗ್ರಹದ ಪಾತ್ರ ತೀವ್ರಗೊಂಡಿದೆ.
ಚಂದ್ರನಲ್ಲಿ ನೀರಿನ ಅಂಶ ಇದೆ ಎಂದು ಹೇಳಿದ್ದು, ಚಂದ್ರನ ದಕ್ಷಿಣ ಭಾಗ ಹೇಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದು, ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ ಮತ್ತು ಬೇರ್ಪಡಿಸುವ ತಂತ್ರಜ್ಞಾನದಲ್ಲಿ ಇಸ್ರೋ ಮಾಡಿರುವ ಸಾಧನೆಯನ್ನು ಜಗತ್ತು ಸ್ವಾಗತಿಸಿದೆ. ಭಾರತದ ಬಾಹ್ಯಾಕಾಶ ವಿಜ್ಞಾನಿಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಹಿಂದೆ ಕ್ರಯೋಜನಿಕ್ ಎಂಜಿನ್ ರಷ್ಯಾದಿಂದ ಭಾರತಕ್ಕೆ ಬಂದಾಗ ಅಮೆರಿಕ ಅರ್ಥಿಕ ದಿಗ್ಬಂಧನ ವಿಧಿಸಿತ್ತು. ಇದರಿಂದ ಇಸ್ರೋ ಅಭಿವೃದ್ಧಿಗೆ ಅನುಕೂಲವಾಯಿತು. ಅಬ್ದುಲ್ ಕಲಾಂ ಮತ್ತಿತರ ವಿಜ್ಞಾನಿಗಳು ಅಮೆರಿಕದ ನಿರ್ಧಾರವನ್ನು ಸವಾಲಾಗಿ ಸ್ವೀಕರಿಸಿ ಸ್ವದೇಶಿ ಉತ್ಪಾದನೆಗೆ ಆದ್ಯತೆ ನೀಡಿದರು. ಹೀಗಾಗಿ ಅಮೆರಿಕ ತಾನು ವಿಧಿಸಿದ್ದ ದಿಗ್ಬಂಧನವನ್ನು ಹಿಂದಕ್ಕೆ ಪಡೆಯಬೇಕಾಗಿ ಬಂದಿತು. ಈಗ ಇಸ್ರೋದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿದೆ. ಹಿಂದೆ ಒಂದು ಕಾಲದಲ್ಲಿ ಇಸ್ರೋಗೆ ನೀಡಿದ ಹಣ ವ್ಯರ್ಥ ಎಂದು ಹೇಳುತ್ತಿದ್ದರು. ಈಗ ಅಭಿಪ್ರಾಯ ಬದಲಾಗಿದೆ. ಪ್ರಧಾನಿ ಮೋದಿ ಇಸ್ರೋ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇಸ್ರೋ ಪ್ರಯೋಗ ವಿಫಲವಾದರೂ ಅದರ ಬಗ್ಗೆ ಮೋದಿ ಚಿಂತಿಸುತ್ತಿಲ್ಲ. ಹೊಸ ಪೀಳಿಗೆ ಕೂಡ ಇಸ್ರೋದಲ್ಲಿ ಕೆಲಸ ಮಾಡಲು ಬಯಸುತ್ತಿರುವುದು ಉತ್ತಮ ಬೆಳವಣಿಗೆ. ಇಸ್ರೋದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಸಂಬಳ ದೊರಕದೇ ಇರಬಹುದು. ಆದರೆ ಹೆಗ್ಗಳಿಕೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ ತಿಳಿಯುತ್ತದೆ. ಹಿಂದೆ ಉಪಗ್ರಹ ಉಡಾವಣೆಗೆ ಸರ್ಕಾರವೇ ಬಂಡವಾಳ ಹೂಡಬೇಕಿತ್ತು. ಈಗ ಕಾಲ ಬದಲಾಗಿದೆ. ಖಾಸಗಿಯವರೂ ಉಪಗ್ರಹ ಉಡಾವಣೆಗೆ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಅಂತರಿಕ್ಷದಲ್ಲೇ ವಾಸಿಸಲು ಜನ ಮುಂದೆ ಬರುತ್ತಿದ್ದಾರೆ. ಈಗ ಉಪಗ್ರಹಗಳ ಜೋಡಣೆ ಮತ್ತು ಬೇರ್ಪಡಿಸುವ ತಂತ್ರಜ್ಞಾನವನ್ನು ಇಸ್ರೋಗಳಿಸಿರುವುದು ಗಗನಯಾತ್ರಿಗಳನ್ನು ಕಳುಹಿಸಲು ಅನುಕೂಲ ಮಾಡಿಕೊಡಲಿದೆ. ಇಡೀ ಸೌರ ಮಂಡಲವನ್ನು ತಿಳಿದುಕೊಳ್ಳಲು ಇಸ್ರೋ ಪ್ರಯೋಗಗಳು ಸಹಕಾರಿಯಾಗಿದ್ದು ಮುಂದಿನ ದಿನಗಳಲ್ಲಿ ಬರಲಿರುವ ಬದಲಾವಣೆಗೆ ವೇದಿಕೆ ಆಗಲಿದೆ. ಸಾಮಾನ್ಯವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಅಧ್ಯಯನ ನಡೆಸುವವರು ಕಡಿಮೆ. ಈಗ ಬಾಹ್ಯಾಕಾಶ ವಿಜ್ಞಾನ ಮತ್ತು ಇಸ್ರೋ ಸಾಧನೆ ಯುವ ಪೀಳಿಗೆಯನ್ನು ಸೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ಶುದ್ಧ ವಿಜ್ಞಾನ ಅಧ್ಯಯನಕ್ಕಿಂತ ತಂತ್ರಜ್ಞಾನ ಹೆಚ್ಚು ಆಕರ್ಷಕ. ಇದರಿಂದ ಹೆಚ್ಚು ಸಂಬಳ ಪಡೆಯುವುದು ಸುಲಭ. ಇಸ್ರೋ ಸಂಸ್ಥೆ ಮಾತ್ರ ಇದಕ್ಕೆ ಅಪವಾದ. ಇದು ಸರ್ಕಾರಿ ಸಂಸ್ಥೆಯಾಗಿದ್ದರೂ ಯುವ ಪೀಳಿಗೆ ಇಲ್ಲಿ ಕೆಲಸ ಮಾಡಲು ಬಯಸುವುದು ಉತ್ತಮ ಲಕ್ಷಣ. ಮುಂಬರುವ ದಿನಗಳಲ್ಲಿ ಇಸ್ರೋದಲ್ಲಿ ಕೆಲಸ ಮಾಡಲು ವಿದೇಶಿಯರು ಕ್ಯೂನಿಲ್ಲುವುದು ಆಶ್ಚರ್ಯವೇನೂ ಆಗುವುದಿಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ಮಾನವಸಂಪನ್ಮೂಲ ಹೊಂದಿರುವ ದೇಶ ಎಂದರೆ ಭಾರತ ಎಂದಾಗಲಿದೆ. ಜಗತ್ತಿನ ಪ್ರಬಲ ದೇಶಗಳೂ ಮಾನವ ಸಂಪನ್ಮೂಲಕ್ಕೆ ಭಾರತದತ್ತ ತಿರುಗಿ ನೋಡುವುದು ಅನಿವಾರ್ಯ.

Previous articleಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ಇಂದಿನಿಂದ ಆರಂಭ
Next articleಚಂದಪ್ಪ ನಿನ್ ನಾಲ್ಕ್ ಉಧೋ-ಉಧೋ…