ಇಷ್ಟಾರ್ಥ ಸಿದ್ಧಿ ನವಲಗುಂದ `ರಾಮಲಿಂಗ ಕಾಮಣ್ಣ’

ಚಂದ್ರಶೇಖರ ಕೊಟಗಿ
ನವಲಗುಂದ: ಪಟ್ಟಣವು ಈ ನಾಡಿನ ಗಮನ ಸೆಳೆದು, ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿ ಓಣಿಗೊಂದು ಕಾಮಣ್ಣನನ್ನು ಪ್ರತಿಷ್ಠಾಪಿಸಿ, ಹಿರಿಯರು, ಯುವಕರು ಸೇರಿ ವಿಜೃಂಭಣೆಯಿಂದ ಕಾಮದೇವನನ್ನು ದಹಿಸುವ ರೂಢಿಯಿದೆ. ಆದರೆ, ರಾಮಲಿಂಗ ಓಣಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಕಾಮಣ್ಣ, ಭಕ್ತರ ಬೇಡಿಕೆ ಈಡೇರಿಸುವ, ಕಾಮಧೇನು ಕಲ್ಪವೃಕ್ಷವೆಂದು ಶ್ರೀ ರಾಮಲಿಂಗೇಶ್ವರ ಕಾಮಣ್ಣ ದೇವರಾಗಿ ರಾಜ್ಯ, ಅಂತರ ರಾಜ್ಯದಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದಾನೆ.
ಇಲ್ಲಿ ಪ್ರತಿಷ್ಠಾಪನೆಗೊಳ್ಳುವ ಕಾಮದೇವರು ಧರಿಸುವ ಒಂದೊಂದು ಆಭರಣಗಳು ಒಂದೊಂದು ಬಯಕೆ ಈಡೇರಿಸುವ ಸಂಕೇತಗಳಾಗಿವೆ ಎಂಬುದು ಭಕ್ತರ ನಂಬಿಕೆ.

ತೊಟ್ಟಿಲು: ಮಕ್ಕಳಾಗದೇ ಇರುವವರು ಪುತ್ರ ಸಂತಾನ, ಸಂತಾನ ಪ್ರಾಪ್ತಿಗಾಗಿ ನವಲಗುಂದ ಕಾಮಣ್ಣನ ಮೊರೆ ಹೋಗುತ್ತಾರೆ. ಸಂತಾನ ಆದರೆ ಸಾಕೆಂದು ಕಾಮದೇವರ ತೊಟ್ಟಿಲು ತೆಗೆದುಕೊಂಡು ಪೂಜೆ ಮಾಡಿ ಸಂತಾನ ಪಡೆದುಕೊಳ್ಳುತ್ತಾರೆ. ಸಂತಾನ ಆದ ಬಳಿಕ ಮುಂದಿನ ವರ್ಷ ಮಕ್ಕಳೊಂದಿಗೆ ಬಂದು ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ.

ಗುಂಡಗಡಿಗೆ ಮತ್ತು ಮೀಸೆ: ಕಾಮದೇವರ ಈ ಎರಡು ಸಂಕೇತಗಳು ವಿಶೇಷವಾಗಿ ಗಂಡು ಸಂತಾನಕ್ಕಾಗಿ ಭಕ್ತರು ಈ ಸಂಕೇತಗಳನ್ನು ತೆಗೆದುಕೊಂಡು ಪೂಜೆ ಮಾಡಿ ಗಂಡು ಸಂತಾನ ಪಡೆದುಕೊಳ್ಳುವರು.

ಹಸ್ತಗಳು: ಕಾಮ ದೇವರ ಹಸ್ತವು ಮಕ್ಕಳ ವಿದ್ಯಾಭ್ಯಾಸ ಹಾಗೂ ಶಿಕ್ಷಣ ಮುಂದುವರಿಕೆಗಾಗಿ ಹಾಗೂ ಇತರ ಸಾಧನೆಗಾಗಿ, ಜೀವನದಲ್ಲಿ ಎಲ್ಲ ವಿದ್ಯೆಗಳು ಕೈ ವಶವಾಗಿ ಲಭಿಸಲೆಂದು ಭಕ್ತರು ಕಾಮದೇವರ ಹಸ್ತಗಳು ತೆಗೆದುಕೊಂಡು ಪೂಜೆ ಮಾಡುವರು.

ಪಾದಗಳು: ಕಾಮ ದೇವರ ಈ ಪಾದದ ಸಂಕೇತಗಳು ಮನುಜರಿಗೆ ಜೀವನಕ್ಕಾಗಿ ಬೇಕಾಗುವ ದ್ರವ್ಯಗಳ ಸಂಪಾದನೆ ಮಾಡಿಕೊಳ್ಳಲು ಸೂಚಿಸುತ್ತದೆ. ಭೂಮಿ, ಸೀಮೆ, ವ್ಯಾಪಾರ, ನೌಕರಿ ಇವೆಲ್ಲ ದ್ರವ್ಯಗಳಾಗಿವೆ. ಕಾಮ ದೇವರ ಪಾದಗಳ ಒಯ್ದು ಪೂಜಿಸಿದರೆ ಎಲ್ಲ ತರಹದ ದ್ರವ್ಯಗಳು ಸಂಪಾದನೆಯಾಗುವ ನಂಬಿಕೆ ಇದೆ. ಭಕ್ತರು ಈ ಪಾದಗಳ ತೆಗೆದುಕೊಂಡು ಪೂಜಿಸಿ ದ್ರವ್ಯ ಭಾಗ್ಯಗಳ ಪಡೆದು ಸಂತುಷ್ಟರಾಗುವರು.

ಛತ್ರಿ: ಕಾಮದೇವರ ಪ್ರಮುಖ ಸಂಕೇತ ಈ ಛತ್ರಿ ಪ್ರತಿಯೊಬ್ಬ ಮಾನವನು ತನ್ನ ವಾಸಕ್ಕಾಗಿ ಮನೆ ಕಟ್ಟಿಕೊಳ್ಳುವ ಮಹದಾಸೆಯ ಕನಸು ಕಂಡಿರುತ್ತಾನೆ. ಮನೆ ನೆಮ್ಮದಿಗಾಗಿ ಮನೆ ಬೇಕೆಂದು ಮನೆ ಕಟ್ಟಬೇಕೆಂದಿರುವವರು ಕಾಮದೇವರ ಛತ್ರಿ ತೆಗೆದುಕೊಂಡು ಪೂಜೆ ಮಾಡಿ ಮನೆ ಕಟ್ಟಿಕೊಳ್ಳುವರು.

ಕುದುರೆ: ಏನಿದ್ದರೇನು ಅನುಭವಿಸಲು ಆರೋಗ್ಯವೇ ಇಲ್ಲದಿದ್ದರೆ ಮಾನವ ಗಳಿಸಿದ್ದೆಲ್ಲ ನಶ್ವರ. ಆರೋಗ್ಯವಿರುವವನ ಕಂಡು ಅವನೇನು ಕುದುರೆ ಇದ್ದಂಗ ಇದ್ದಾನೆ ಎಂದು ಹೇಳುವ ಮಾತು ವಾಡಿಕೆ. ಅಲ್ಲದೇ ಕುದರೆ ತನ್ನ ಮೈಮಾಟ ಹಾಗೂ ಅದರ ಓಟದಿಂದ ಬಹಳ ಆಕರ್ಷಕ ಪ್ರಾಣಿ, ಅದರಂತೆ ಮಾನವ ಅಂಗ ಸೌಂದರ್ಯದಿಂದ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ರೋಗ ರುಜಿನಗಳು ಬಳಲುವವರು ಕಾಮದೇವರ ಕುದುರೆ ತೆಗೆದುಕೊಂಡು ಪೂಜಿಸಿ ಉತ್ತಮ ಆರೋಗ್ಯ ಪಡೆದುಕೊಂಡು ನೆಮ್ಮದಿ ಜೀವನ ನಡೆಸುವರು.

ಕಣ್ಣುಬಟ್ಟು, ಕಣ್ಣು: ದೇವರು ಸೃಷ್ಟಿಸಿದ ಸುಂದರ ಪ್ರಪಂಚ ನೋಡಲು ಹಾಗೂ ಪ್ರಪಂಚದ ಜ್ಞಾನವ ನೋಡಿ ತಿಳಿದುಕೊಂಡು ನಾವು ಜೀವನ ಮಾಡಲು ನಮಗೆ ಕಣ್ಣುಗಳು ಬೇಕೇಬೇಕು. ಇಂಥ ಕಣ್ಣುಗಳು ಕಾಣದಾದಾಗ ಮರಳಿ ನಮಗೆ ಕಣ್ಣಿನ ದೃಷ್ಟಿ ಸರಿಯಾಗಲು ಭಕ್ತರು ಈ ಕಾಮದೇವರ ಕಣ್ಣುಬೊಟ್ಟು ತೆಗೆದುಕೊಂಡು ಪೂಜಿಸಿ ಮರಳಿ ಕಣ್ಣು ಕಾಣುವಂತೆ ಮಾಡಿಕೊಳ್ಳುವರು. ಹೀಗೆ ಶ್ರೀರಾಮಲಿಂಗೇಶ್ವರ ಕಾಮಣ್ಣ ದೇವರು ಬೇಡಿದ ವರಗಳ ದಯಪಾಲಿಸಿ ಭಕ್ತರ ಪಾಲಿನ ಕಾಮಧೇನು ಆಗಿರುತ್ತಾನೆ.

ಯುಗಾದಿ ಪ್ರತಿಪದೆಯಂದು ಕಾಮದೇವರು ಮರುಜನ್ಮ
ಮತ್ತೆ ಹೊಸ ವರ್ಷದ ಯುಗಾದಿ ಪ್ರತಿಪದೆಯಂದು ಕಾಮದೇವರು ಮರುಜನ್ಮ ಪಡೆಯುತ್ತಾನೆ. ಅದರ ಪ್ರತೀಕವಾಗಿ ಪಾಡ್ಯದ ಒಂದು ದಿನ ಮತ್ತೆ ಕಾಮದೇವರ ಪ್ರತಿಷ್ಠಾಪನೆಯಾಗುತ್ತದೆ. ಭಕ್ತರಿಗೆ ಅಂದು ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ಹುಣ್ಣಿಮೆಯ ಉತ್ಸವದಲ್ಲಿ ಬರದೇ ಇರುವ ಭಕ್ತರು ಯುಗಾದಿ ಪಾಡ್ಯದಂದು ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಹರಕೆಗಳನ್ನು ಅರ್ಪಿಸುವುದಕ್ಕೆ ಭಕ್ತರು ಬರುತ್ತಾರೆ.

೧೧ ರಿಂದ ದರ್ಶನಕ್ಕೆ ಲಭ್ಯ…
ನವಲಗುಂದ ಪಟ್ಟಣದ ರಾಮಲಿಂಗ ಓಣಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಣ್ಣನ ದರ್ಶನಕ್ಕೆ ಲಭ್ಯವಿದೆ. ಮಾ. ೧೪ ರಂದು ಹೊಳಿ ಹುಣ್ಣಿಮೆ ಆಚರಿಸಲಾಗುವುದು. ಮಾ. ೧೫ ರಂದು ಬಣ್ಣದ ಓಕುಳಿ ನಡೆಯಲಿದೆ. ಅಂದು ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಮಲಿಗ ಕಾಮಣ್ಣ ಹಾಗೂ ವಿವಿಧ ೧೪ ಓಣಿಯ ಪ್ರತಿಷ್ಠಾಪಿಸಿದ ವೈಶಿಷ್ಟ್ಯ ಪೂರ್ಣ ಕಾಮಣ್ಣಗಳು ಹಲಗಿ, ವಾದ್ಯ ಮೇಳದೊಂದಿಗೆ ಮೆರವಣೆಗೆ ನಡೆಯಲಿದೆ. ಉಳಿದ ಕಾಮಣ್ಣಗಳ ಅಗ್ನಿಸ್ಪರ್ಶದ ನಂತರ ಇಷ್ಟಾರ್ಥ ಸಿದ್ಧಿ ರಾಮಲಿಂಗ ಕಾಮಣ್ಣನ ದಹನವಾಗಲಿದೆ.