ಕಾಂಗ್ರೆಸ್ ಖಾತೆ ತೆರೆಯದೇ ಇದ್ದರೂ ಸಹ ಕ್ಯಾತೆ ತೆಗೆಯುವುದನ್ನ ನಿಲ್ಲಿಸಲ್ಲ…
ಬೆಂಗಳೂರು: ಕಾಂಗ್ರೆಸ್ಸಿನವರು ಇವಿಎಂ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದ ಮುಂಭಾಗದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ವಿಜಯೋತ್ಸವದಲ್ಲಿ ಭಾಗಿಯಾದ ಬಳಿಕ ಅವರು ಮಾತನಾಡಿ ಕಾಂಗ್ರೆಸ್ಸಿನ ಸ್ಥಿತಿ ಏನು ಎಂಬುದನ್ನು ದೆಹಲಿ ಫಲಿತಾಂಶದ ಮೂಲಕ ತಿಳಿದುಕೊಳ್ಳಬಹುದಾಗಿದೆ. ರಾಹುಲ್ ಗಾಂಧಿಯವರು ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದು ಒಳ್ಳೆಯದು. ಕಾಂಗ್ರೆಸ್ ಖಾತೆ ತೆರೆಯದೇ ಇದ್ದರೂ ಸಹ ಕ್ಯಾತೆ ತೆಗೆಯುವುದನ್ನ ನಿಲ್ಲಿಸಲ್ಲ. ಈ ಫಲಿತಾಂಶವನ್ನು ಎಲ್ಲಾ ಸಮೀಕ್ಷೆಗಳೂ ಮೊದಲೇ ಹೇಳಿದ್ದವು. ಆದ್ದರಿಂದ, ಕಾಂಗ್ರೆಸ್‌ನವರು ಇನ್ನಾದರೂ ಇವಿಎಂಗಳ ವಿರುದ್ಧ ಮಾತನಾಡುವುದನ್ನ ನಿಲ್ಲಿಸಬೇಕು. ಇನ್ನು ಮುಂದೆಯೂ ಇವಿಎಂಗಳ ಕುರಿತು ಮಾತನಾಡಿದರೆ ದೇಶದಲ್ಲಿ ಅಪಮಾನಕ್ಕೀಡಾಗುತ್ತೀರಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬರ್ಮುಡಾ ಬಿಟ್ಟರೆ ಇನ್ಯಾವ ವೇಷವೂ ಉಳಿದಿಲ್ಲ. ದಯವಿಟ್ಟು ರಾಜಕೀಯ ನಿವೃತ್ತಿ ಪಡೆದು ಉಳಿಯುವುದು ಒಳಿತು ಎಂದರು.