ಸಂ.ಕ.ಸಮಾಚಾರ ದಾವಣಗೆರೆ: ಇನ್‌ಸ್ಟ್ರಾಗ್ರಾಂನಲ್ಲಿ ಬಂದ ಲಿಂಕ್ ನಂಬಿ ಹಣ ಹೂಡಿಕೆ ಮಾಡಿದ್ದ ವ್ಯಾಪಾರಿಯೊಬ್ಬರು ೫೧ ಲಕ್ಷ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಹಳ್ಳಿಯ ಮಧುಕುಮಾರ್ ಎಂಬುವರಿಗೆ ಹಣ ಹೂಡಿಕೆ ಮೇಲೆ ಶೇ.೨೦೦ರಷ್ಟು ಲಾಭ ಸಿಗಲಿದೆ ಎಂದು ಇನ್ಸ್ಸ್ಟಾçಗ್ರಾಂನಲ್ಲಿ ಲಿಂಕ್ ಬಂದಿತ್ತು. ಇದನ್ನೇ ನಂಬಿದ ಮಧುಕುಮಾರ್ ತಮ್ಮ ಹೆಸರು, ಪ್ಯಾನ್ ಕಾರ್ಡ್, ಫೋನ್ ನಂಬರ್ ನೀಡಿ ಹೊಸ ಐಡಿ ತೆರೆದಿದ್ದಾರೆ. ಕಳೆದ ೨೦೨೪ರ ಸೆಪ್ಟಂಬರ್ ೨೨ರಿಂದ ೨೦೨೫ ಏಪ್ರಿಲ್ ೨೬ರವರೆಗೆ ಒಟ್ಟು ೫೧,೨೪,೪೬೪ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.
ಮೊದಲು ೨೦ ಲಕ್ಷ ರೂ. ಹಾಕಿದಾಗ ೯ ಲಕ್ಷ ರೂ. ಲಾಭಾಂಶ ತೋರಿಸುತ್ತಿತ್ತು. ಅದನ್ನು ಬಿಡಿಸಿಕೊಳ್ಳಲು ಮಧುಕುಮಾರ್ ಹೋದಾಗ, ಬೋನಸ್ ಇನ್ನೂ ಪೂರ್ಣಗೊಂಡಿಲ್ಲ. ೫೦ ಲಕ್ಷ ರೂ. ಹೂಡಿಕೆ ಮಾಡಿದ ಮೇಲೆ ಶೇ.೨೦೦ ಲಾಭವನ್ನು ಯಾವುದೇ ಕಮಿಷನ್ ನೀಡದೇ ಬಿಡಿಸಿಕೊಳ್ಳಬಹುದು ಎಂದು ಸಂಪರ್ಕದಲ್ಲಿದ್ದ ಅಪರಿಚಿತರು ಚಾಟ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಇದನ್ನು ನಂಬಿದ ಮಧುಕುಮಾರ್ ಒಟ್ಟು ೫೧ ಲಕ್ಷ ರೂ. ಹೂಡಿಕೆ ಮಾಡಿದ್ದರು. ಬೋನಸ್ ಸೇರಿದಂತೆ ೧.೦೫ ಕೋಟಿ ರೂ. ಲಾಭ ಆನ್‌ಲೈನ್‌ನಲ್ಲಿ ತೋರಿಸುತ್ತಿತ್ತು. ಹಣವನ್ನು ಡ್ರಾ ಮಾಡಿಕೊಳ್ಳಲು ಒತ್ತಿದಾಗ ಈ ಹಣದಲ್ಲಿ ಜಿಎಸ್‌ಟಿ, ಟಿಸಿಎಸ್ ಸೇರಿದಂತೆ ಶೇ.೪೦ರಷ್ಟು ಹಣ ಕಡಿತವಾಗುವುದರಿಂದ ವಿತ್ ಡ್ರಾ ಮಾಡದಂತೆ ಅಪರಿಚಿತರು ತಿಳಿಸಿದ್ದಾರೆ.
ಆದರೂ ಮಧುಕುಮಾರ್ ಹಣ ಬಿಡಿಸಿಕೊಳ್ಳಲು ಹೋದಾಗ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ೨೪ ಗಂಟೆ ನಂತರ ಅಕೌಂಟ್ ರೀ ಓಪನ್ ಆದಾಗ, ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಜೀರೋ ತೋರಿಸಿದೆ. ಚಾಟ್ ಬೋರ್ಡ್ನಲ್ಲಿ ಸಂಪರ್ಕಿಸಿದಾಗ ಎಲ್ಲವನ್ನೂ ಡಿಲಿಟ್ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.