ಇಡಿ ನಿರ್ದೇಶಕರ ನೇಮಕ ಕೇಂದ್ರಕ್ಕೆ ಸುಪ್ರೀಂ ತಪರಾಕಿ

0
8

ಆರ್ಥಿಕ ಅಪರಾಧಗಳ ಪತ್ತೆಗೆ ಇರುವ ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ನೇಮಕದಲ್ಲಿ ಪಕ್ಷಪಾತದ ವಾಸನೆ ಕಂಡು ಬರಬಾರದು.

ಕೇಂದ್ರ ಸರ್ಕಾರ ಇಡಿ ನಿರ್ದೇಶಕರ ಸೇವಾವಧಿ ಮುಂದುವರಿಕೆಗೆ ಮೂರು ಬಾರಿ ಅದೇಶ ಹೊರಡಿಸಿದೆ. ಒಮ್ಮೆ ರಾಷ್ಟ್ರಪತಿ ಸುಗ್ರೀವಾಜ್ಞೆ ಮೂಲಕ ಅವಧಿ ವಿಸ್ತರಿಸಿದರು. ಆಗ ಸಿಬಿಐ ಮುಖ್ಯಸ್ಥರ ಸೇವಾವಧಿಯೂ ಸೇರಿತ್ತು. ಹಿಂದೆ ಸುಪ್ರೀಂ ಕೋರ್ಟ್ ಕೇಂದ್ರದ ಈ ಕ್ರಮಕ್ಕೆ ಒಪ್ಪಿಗೆ ನೀಡಿತ್ತು. ಈ ಬಾರಿ ಮೂರನೇ ಅವಧಿ ವಿಸ್ತರಣೆಗೆ ತೀವ್ರವಾಗಿ ಆಕ್ಷೇಪಿಸಿದೆ. ಈ ರೀತಿ ಉನ್ನತ ಹುದ್ದೆಯಲ್ಲಿದ್ದವರನ್ನು ಹೆಚ್ಚು ವರ್ಷ ಮುಂದುವರಿಸುವುದು ಸರಿಯಲ್ಲ. ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ಸಮರ್ಥ ಅಧಿಕಾರಿಗಳೇ ಇಲ್ಲ ಎಂಬ ಭಾವನೆ ಜನರಲ್ಲಿ ಮೂಡುವುದು ಸಹಜ. ಅಲ್ಲದೆ ಸೇವಾವಧಿ ವಿಸ್ತರಣೆ ಪಡೆದ ವ್ಯಕ್ತಿಯಲ್ಲೂ ಅಹಂಕಾರ ಮೂಡಿದಲ್ಲಿ ಆಶ್ಚರ್ಯವೇನೂ ಇಲ್ಲ. ಈಗಿನ ಯುವಕ-ಯುವತಿಯರು ಯಾವುದೇ ಹುದ್ದೆಗೆ ಬೇಕಾದ ಸಾಮರ್ಥವನ್ನು ಪಡೆದುಕೊಂಡಿರುತ್ತಾರೆ. ಅವರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ. ಸರ್ಕಾರಿ ನೌಕರರಿಗೆ ನಿವೃತ್ತಿಯ ವಯಸ್ಸು ನಿಗದಿಪಡಿಸಿರುವ ಮೂಲ ಉದ್ದೇಶವೇ ಯುವ ಶಕ್ತಿ ಇಲಾಖೆಯಲ್ಲಿ ಸದಾ ಕಾಲ ಇರಬೇಕೆಂಬುದೇ ಆಗಿದೆ. ಕೇಂದ್ರದಲ್ಲಿ ಸಿಬಿಐ, ಸಿವಿಸಿ ಮತ್ತು ಇಡಿ ತನಿಖಾ ಸಂಸ್ಥೆಗಳು ಅತಿ ಹೆಚ್ಚಿನ ಅಧಿಕಾರವನ್ನು ಹೊಂದಿವೆ. ಈ ಸಂಸ್ಥೆಗಳ ಮುಖ್ಯಸ್ಥರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ಅಗತ್ಯ. ಪ್ರಧಾನಿ ಅಧಿಕಾರಕ್ಕೆ ಬಂದ ದಿನವೇ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದರು. ಅದಕ್ಕಾಗಿ ಉನ್ನತ ತನಿಖಾ ಸಂಸ್ಥೆಗಳನ್ನು ಸಬಲಗೊಳಿಸಿದರು. ಇದರ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರದ ತಾಳಕ್ಕೆ ತಕ್ಕಂತೆ ಕೆಲಸ ಮಾಡುವ ಅಧಿಕಾರಿಗಳು ಇರಬೇಕು ಎಂದು ಬಯಸುವುದು ಎಲ್ಲ ಸರ್ಕಾರಗಳ ಧೋರಣೆ. ಆದರೆ ನಿವೃತ್ತರಾಗಬೇಕಾದ ಅಧಿಕಾರಿಯನ್ನು ಮುಂದುವರಿಸುವುದು ಸರಿಯಲ್ಲ. ಕೆಲವು ಕೈಗೊಂಡ ಕ್ರಮಗಳು ಅರ್ಧದಲ್ಲೇ ನಿಲ್ಲಬಾರದು ಎಂದು ಉನ್ನತ ಅಧಿಕಾರಿಗಳನ್ನು ಕೆಲವು ತಿಂಗಳು ಮುಂದುವರಿಸುವುದುಂಟು.
ಮೂರು ಬಾರಿ ವಿಸ್ತರಣೆ ನೀಡಿರುವುದು ಅನುಮಾನಕ್ಕೆ ಕಾರಣವಾಗುತ್ತದೆ. ಅದರಲ್ಲೂ ಇಡಿ ಸಂಸ್ಥೆ ಪ್ರತಿಪಕ್ಷಗಳ ಹಲವು ನಾಯಕರ ಮನೆ ಮೇಲೆ ದಾಳಿ ನಡೆಸಿ ಮೊಕದ್ದಮೆಗಳನ್ನು ಹೂಡಿವೆ. ಇದರಿಂದ ಸಹಜವಾಗಿ ಉನ್ನತ ಸಂಸ್ಥೆಯ ದುರ್ಬಳಕೆ ಆರೋಪ ಕೇಳಿ ಬರುವುದು ಸಹಜ. ಅದಕ್ಕೆ ತಕ್ಕಂತೆ ಕೇಂದ್ರದ ವರ್ತನೆಯೂ ಕಾಕತಾಳೀಯವಾಗಿದೆ. ಇಂಥ ಸಂದರ್ಭಗಳಿಗೆ ಕೇಂದ್ರ ಅವಕಾಶ ಮಾಡಿಕೊಡಬಾರದು. ನಿರ್ದೇಶಕರು ಯಾರಾದರೇನು ಆಡಳಿತ ನಡೆಸುವವರು ದಕ್ಷತೆಯಿಂದ ಕೆಲಸ ಮಾಡಿದರೆ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ. ಆಡಳಿತ ನಡೆಸುವವರಿಗೆ ಇಡೀ ವ್ಯವಸ್ಥೆಯ ಮೇಲೆ ನಂಬಿಕೆ ಇರಬೇಕು. ಒಬ್ಬ ವ್ಯಕ್ತಿಯ ಮೇಲಲ್ಲ. ಸರ್ಕಾರ ಯಾವುದೇ ಒಬ್ಬ ಅಧಿಕಾರಿಯನ್ನು ಅವಲಂಬಿಸಬಾರದು. ಈ ವಿಷಯದಲ್ಲಿ ಹಿಂದಿನವರ ಆಡಳಿತ ವೈಖರಿಯನ್ನು ಅನುಸರಿಸುವುದು ಸೂಕ್ತ. ಪಿ.ವಿ. ನರಸಿಂಹರಾವ್ ಇಡೀ ವ್ಯವಸ್ಥೆಯ ಸುಧಾರಣೆಗೆ ಕ್ರಮ ಕೈಗೊಂಡವರು. ಹೊಸ ಆರ್ಥಿಕ ನೀತಿ ಜಾರಿಗೆ ಬರಲು ಅವರ ಚಿಂತನೆಯೇ ಕಾರಣ ಎಂಬುದನ್ನು ಮರೆಯುವಂತಿಲ್ಲ. ನಿರಂಕುಶ ಪ್ರಭುತ್ವ ಪ್ರಜಾತಂತ್ರದಲ್ಲಿ ಅತ್ಯಂತ ಆಕರ್ಷಕವಾಗಿ ಕಂಡರೂ ಒಳಿತಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಪ್ರಮುಖವಾಗುವುದಿಲ್ಲ ಎಂಬುದನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರೆಲ್ಲ ಒಪ್ಪಿಕೊಳ್ಳಲೇಬೇಕು. ಉತ್ತಮ ರಾಜನಿಗಿಂತ ಕಳಪೆ ಜನಪ್ರತಿನಿಧಿ ಮೇಲು ಎಂಬುದರಲ್ಲಿ ನಂಬಿಕೆ ನಮ್ಮದು. ಹೀಗಾಗಿ ಕೇಂದ್ರ ಸರ್ಕಾರ ಉನ್ನತ ತನಿಖಾಸಂಸ್ಥೆಗಳಲ್ಲಿ ಸಶಕ್ತ ಯುವಪಡೆಯನ್ನು ಸಿದ್ಧಪಡಿಸಬೇಕೇ ಹೊರತು ಒಬ್ಬ ವ್ಯಕ್ತಿಯನ್ನು ಅವಲಂಬಿಸಬಾರದು. ಅದು ಔದಾರ್ಯದ ಉರುಳಾಗುವುದರಲ್ಲಿ ಸಂದೇಹವಿಲ್ಲ. ಇಡಿ ಉನ್ನತ ತನಿಖಾ ಸಂಸ್ಥೆ ಇರುವುದೇ ಅಕ್ರಮ ಹಣ ವರ್ಗಾವಣೆ ಸೇರದಂತೆ ಹಲವು ಆರ್ಥಿಕ ಅಪರಾಧಗಳನ್ನು ಪತ್ತೆಹಚ್ಚಿ ಅದರಲ್ಲಿ ಭಾಗಿಯಾದವರಿಗೆ ಉಗ್ರ ಶಿಕ್ಷೆ ಲಭಿಸುವಂತೆ ಮಾಡುವುದಕ್ಕೆ. ಹೀಗಿರುವಾಗ ಅದರಲ್ಲಿ ಪಕ್ಷಪಾತ ಧೋರಣೆ, ದ್ವೇಷದ ಕ್ರಮಗಳು ನುಸುಳಬಾರದು. ಇಂಥ ಸಂಸ್ಥೆಗಳ ಬಗ್ಗೆ ನ್ಯಾಯಾಂಗ ಮತ್ತು ಜನಸಾಮಾನ್ಯರು ಅಚಲ ವಿಶ್ವಾಸ ಹೊಂದಿರುತ್ತಾರೆ. ಅದಕ್ಕೆ ಧಕ್ಕೆ ಬರಬಾರದು.

Previous articleಮುನಿಗಳ ಡೈರಿಯ ಹಿಂದೆ ಬಿದ್ದ ಖಾಕಿಪಡೆ
Next articleನಂಬಿದ ಸ್ನೇಹಿತನಿಗೆ ಎಂದೂ ದ್ರೋಹ ಬೇಡ