ಇಂದೆ ಕೊನೆ ದಿನ: 2 ಪಕ್ಷಗಳಿಗೆ ತಟ್ಟಲಿದೆಯಾ ಬಂಡಾಯದ ಬಿಸಿ

0
8

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ಜೂನ್‌ 3ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಸಲು ಇಂದೆ ಕೊನೆಯ ದಿನವಾಗಿದೆ.
ವಿಧಾನ ಪರಿಷತ್‌ನ ಆರು ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸದ್ಯ 71 ನಾಮಪತ್ರಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ಪ್ರಕಾರ, ಬಿಜೆಪಿ 4, ಕಾಂಗ್ರೆಸ್‌‍ 5, ಜೆಡಿಎಸ್‌‍ 1 ಹಾಗೂ 40 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟು 49 ಅಭ್ಯರ್ಥಿಗಳಿಂದ 71 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ 68 ಪುರುಷ ಹಾಗೂ 3 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಇಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದ್ದು, ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಜೂನ್‌ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಪರಿಷತ್ ಚುನಾವಣೆಯಲ್ಲಿ ಸಹ ಬಂಡಾಯದ ಬಿಸಿ ರಾಜಕೀಯ ಪಕ್ಷಗಳಿಗೆ ತಟ್ಟಿದೆ. ಈ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯುತ್ತಿದೆ ಎಂದು ಬಿಜೆಪಿ ಜೆಡಿಎಸ್ ವರಿಷ್ಠರು ಹೇಳಿದ್ದರೂ ಟಿಕೆಟ್ ಆಕಾಂಕ್ಷಿಗಳು ಅದಕ್ಕೆ ಕ್ಯಾರೆ ಎನ್ನದೇ ತಮ್ಮ ತಮ್ಮ ಆಕಾಂಕ್ಷಿ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸುವ ಮೂಲಕ ವರಿಷ್ಠರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ ಎನ್ನಬಹುದು. ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿದ್ದೆ ತಲೆನೋವು ಆಯ್ತೇನೋ ಎಂಬ ಅನುಭವ ಎರಡು ಪಕ್ಷಗಳಲ್ಲಿರುವಾಗಲೇ ಪರಿಷತ್ ಚುನಾವಣೆಯಲ್ಲೂ ಅಪಸ್ವರದ ಬೆಳವಣಿಗೆ ಆಗುತ್ತಿರುವುದು ವರಿಷ್ಠರನ್ನು ಕಂಗಡಿಸಿದೆ….

ಚುನಾವಣೆಗೆ ಬಂಡಾಯದ ಬಿಸಿ :
1) ನೈಋತ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಡಾ‌.ಎಸ್.ಆರ್.ಹರೀಶ್ ಆಚಾರ್ಯ,
2) ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ: ಬಿಜೆಪಿ‌ ಬಂಡಾಯ ಅಭ್ಯರ್ಥಿ ಜಿ.ಪಂ‌ ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಸುರೇಶ ಸಜ್ಜನ್,
3) ಬೆಂಗಳೂರು ನಗರ ಪದವೀಧರ ಕ್ಷೇತ್ರ: ಬಿಜೆಪಿ‌ ಬಂಡಾಯ ಅಭ್ಯರ್ಥಿ ಎಂ.ಪುಟ್ಟಸ್ವಾಮಿ,
4) ನೈಋತ್ಯ ಪದವೀಧರರ ಕ್ಷೇತ್ರ: ಬಿಜೆಪಿ‌ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಕೆ.ರಘುಪತಿ ಭಟ್,
5) ನೈಋತ್ಯ ಪದವೀಧರ ಕ್ಷೇತ್ರ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್ .ಪಿ. ದಿನೇಶ್,
6) ದಕ್ಷಿಣ ಶಿಕ್ಷಕರ ಕ್ಷೇತ್ರ: ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ವಿವೇಕಾನಂದ ಅವರಿಗೆ ವರಿಷ್ಠರು ಬಿ ಫಾರಂ ನೀಡಿದ್ದರೆ, ಇನ್ನೊಂದೆಡೆ ಜೆಡಿಎಸ್‌ನಿಂದ ಟಿಕೆಟ್​ಗೆ ಕೆ.ಟಿ.ಶ್ರೀಕಂಠೇಗೌಡ ಪಟ್ಟು ಹಿಡಿದಿದ್ದಾರೆ.

Previous articleಪ್ರಬುದ್ಧ ಮತದಾರರನ್ನು ಭ್ರಷ್ಟಗೊಳಿಸುವ ಕುತಂತ್ರ
Next articleರೈತರ ಕಣ್ಣಲ್ಲಿ ರಕ್ತ ಕಣ್ಣೀರು