ಆ ದೇವರೇ ಬಂದು ಹೇಳಿದರೂ ನಾನು ಕೇಳಲ್ಲ…

0
31

ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ಕೊಟ್ಟ ರಚಿತಾ

ಬೆಂಗಳೂರು: ನಟಿ ರಚಿತಾ ರಾಮ್ ವಿರುದ್ಧ ಇತ್ತೀಚೆಗೆ ಎರಡು ಗಂಭೀರ ಆರೋಪಗಳು ಕೇಳಿಬಂದಿತ್ತು. ಸಂಜು ವೆಡ್ಸ್ ಗೀತಾ-2 ಚಿತ್ರದ ಪ್ರಚಾರಕ್ಕೆ ರಚಿತಾ ಬರುತ್ತಿಲ್ಲ' ಎಂದು ಚಿತ್ರತಂಡ ಹೇಳಿಕೊಂಡಿತ್ತು. ಉಪ್ಪಿ ರುಪ್ಪಿ ಸಿನಿಮಾಕ್ಕೆ ಪಡೆದ ಅಡ್ವಾನ್ಸ್ ರಚಿತಾ ವಾಪಸ್ ನೀಡಿಲ್ಲ ಎಂದು ನಿರ್ಮಾಪಕಿ ವಿಜಯಲಕ್ಷ್ಮೀ ಅರಸ್ ಆರೋಪಿಸಿದ್ದರು. ಇದಕ್ಕೆ ರಚಿತಾರಾಮ್ ವಿಡಿಯೋ ಹರಿಬಿಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೊದಲಿಗೆ ಸಂಜು ವೆಡ್ಸ್ ಗೀತಾ-2 ತಂಡದ ಆರೋಪದ ಬಗ್ಗೆ ಮಾತನಾಡಿರುವ ರಚಿತಾ,ನಾನು ಚಿತ್ರದ ವಿಚಾರದಲ್ಲಿ ನನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದೀನಿ. ಇಷ್ಟು ದಿನ ನನ್ನ ಬಗ್ಗೆ ಮೆಚ್ಚಿ ಮಾತನಾಡುತ್ತಿದ್ದ ಚಿತ್ರತಂಡ ಈಗ ನನ್ನ ವಿರುದ್ಧ ಹೇಳಿಕೆ ಕೊಡುವುದು ಸರಿಯಲ್ಲ. ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಇತ್ತೀಚೆಗೆ ಮಾಧ್ಯಮಗಳ ಮುಂದೆ ನನ್ನ ಬಗ್ಗೆ ಒಂದಷ್ಟು ವಿಚಾರ ಮಾತನಾಡಿದ್ದಾರೆ. ಅವರು ಬಳಸಿದ ಪದಗಳು, ಕೊಟ್ಟ ಹೇಳಿಕೆಯಿಂದ ನನಗೆ ಬಹಳ ನೋವಾಗಿದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದೇ ತಂಡದ ಜೊತೆ ನಾನು ಸಿನಿಮಾ ಮಾಡಿದ್ದೆ. ಜನವರಿ 17ರಂದು ಸಿನಿಮಾ ಬಿಡುಗಡೆ ಆಗಿತ್ತು. ಆಗ ನಡೆದಿದ್ದ ಸುದ್ದಿಗೋಷ್ಠಿ, ಸಂದರ್ಶನಗಳಲ್ಲಿ ಎಲ್ಲಾ ಕಡೆ ನನ್ನ ಬಗ್ಗೆ ಒಳ್ಳೆ ಮಾತುಗಳನ್ನಾಡಿದ್ದರು. ನನ್ನ ನಟನೆ, ಶ್ರಮದ ಬಗ್ಗೆ ಹಾಡಿ ಹೊಗಳಿದ್ದರು. ಅದೇ ತಂಡ ಈಗ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡ್ತಿದೆ’ ಎಂದು ರಚಿತಾ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಜು ವೆಡ್ಸ್ ಗೀತಾ-2 ಚಿತ್ರೀಕರಣದ ವೇಳೆ ನನ್ನ ಮತ್ತೊಂದು ಸಿನಿಮಾ ಬಿಡುಗಡೆ ಆಗುತ್ತಿತ್ತು. ಆ ಚಿತ್ರದ ಪ್ರಚಾರಕ್ಕೆ ನಾನು ಹೋಗಬೇಕಿತ್ತು. ಆದರೆ ಅದಕ್ಕೆ ನಿರ್ದೇಶಕ ನಾಗಶೇಖರ್ ಅವಕಾಶ ಮಾಡಿಕೊಡಲಿಲ್ಲ. ಒಂದು ದಿನ ಕೂಡ ನನಗೆ ಆ ಸಿನಿಮಾ ಪ್ರಚಾರಕ್ಕೆ ಹೋಗಲು ಬಿಡಲಿಲ್ಲ. ಇವರದ್ದು ಮಾತ್ರ ಸಿನಿಮಾ, ಅವರದ್ದು ಸಿನಿಮಾ ಅಲ್ವಾ? ನಾನು ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದೇನೆ, ಈಗ ರೀ-ರಿಲೀಸ್. ಇದೇ ಸಮಯದಲ್ಲಿ ನಾನು ಮತ್ತೊಂದು ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದೀನಿ. ಚಿತ್ರೀಕರಣಕ್ಕೆ ಹೋಗಬೇಕು. ಅದಕ್ಕೆ ಪ್ರಚಾರಕ್ಕೆ ಬರಲಿಲ್ಲ. ಈಗ ಯಾರದ್ದು ತಪ್ಪು ಹೇಳಿ' ಎಂದಿದ್ದಾರೆ ರಚಿತಾ. ಉಪ್ಪಿ ರುಪ್ಪಿ ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಅಡ್ವಾನ್ಸ್ ಪಡೆದು ವಾಪಸ್ ಕೊಟ್ಟಿಲ್ಲ ಎಂದು ನಿರ್ಮಾಪಕಿ ವಿಜಯಲಕ್ಷ್ಮೀ ಆರೋಪಿಸಿದ್ದರು. 8 ವರ್ಷಗಳ ಹಿಂದೆ ಉಪೇಂದ್ರ ಜೊತೆ ರಚಿತಾ ಆ ಚಿತ್ರದಲ್ಲಿ ನಟಿಸಿದ್ದರು. ಕೆಲ ದಿನಗಳ ಚಿತ್ರೀಕರಣದ ಬಳಿಕ ಸಿನಿಮಾ ನಿಂತು ಹೋಗಿತ್ತು. ಆದರೆ 13 ಲಕ್ಷ ರೂ. ಅಡ್ವಾನ್ಸ್ ಪಡೆದಿದ್ದ ರಚಿತಾ ವಾಪಸ್ ಕೊಡಲಿಲ್ಲ, ಚಿತ್ರೀಕರಣಕ್ಕೆ ಬರದೇ ಸತಾಯಿಸಿದ್ದರು ಎಂದು ನಿರ್ಮಾಪಕಿ ಫಿಲಂ ಚೇಂಬರ್ ಮೊರೆ ಹೋಗಿದ್ದರು. ಈ ಆರೋಪದ ಬಗ್ಗೆಯೂ ರಚಿತಾ ಮಾತನಾಡಿದ್ದಾರೆ. ಮತ್ತೊಂದು ಸಿನಿಮಾದಲ್ಲಿ ನಟಿಸಲು ಅಡ್ವಾನ್ಸ್ ಪಡೆದು ನಾನು ಡೇಟ್ಸ್ ಕೊಟ್ಟಿಲ್ಲ ಎಂದು ಆರೋಪ ಬಂದಿದೆ. ಈ ಬಗ್ಗೆ ನಾನು ಮಾತನಾಡುವಂತಿಲ್ಲ. ಕಾರಣ ಸಾ.ರಾ. ಗೋವಿಂದು ಅವರು ಈ ವಿಚಾರವನ್ನು ನೋಡಿಕೊಳ್ಳುತ್ತಿದ್ದಾರೆ. ಫಿಲಂ ಚೇಂಬರ್‌ಗೆ ಈ ವಿಚಾರ ಹೋಗಿದೆ. ಸಾ.ರಾ. ಗೋವಿಂದು ಈ ಬಗ್ಗೆ ಮಾತನಾಡಬಾರದು ಎಂದಿದ್ದಾರೆ. ಈ ವಿಚಾರ ಬೇರೆ ಯಾರೂ ಕೂಡ ಮಾತನಾಡಬಾರದು ಎಂದು ಕೇಳಿಕೊಳ್ಳುತ್ತೇನೆ’ ಎಂದು ರಚಿತಾ ಮನವಿ ಮಾಡಿದ್ದಾರೆ.
`ನಾನು ತಪ್ಪು ಮಾಡಿದ್ದರೆ ಸಣ್ಣ ಮಗುವಿನ ಕಾಲಿಗೆ ಬೀಳಲು ಸಿದ್ಧ. ತಪ್ಪು ಮಾಡದೇ ಇದ್ದರೆ ಆ ದೇವರೇ ಬಂದು ಹೇಳಿದರೂ ನಾನು ಕೇಳಲ್ಲ. ನನ್ನ ಅಭಿಮಾನಿಗಳಿಗೆ ನನ್ನಿಂದ ಏನಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಬೇರೆ ಯಾರಿಗೂ ಕ್ಷಮೆ ಕೇಳಲ್ಲ’ ಎಂದು ರಚಿತಾ ರಾಮ್ ತಿಳಿಸಿದ್ದಾರೆ.

Previous articleಟ್ರಂಪ್ ಪ್ರತಿಕೃತಿ ದಹಿಸಿ ಪ್ರತಿಭಟನೆ
Next articleಪ್ರಜ್ವಲ್ ವಿಚಾರಣೆ ಮುಂದುವರಿಕೆಗೆ ಸೂಚನೆ