ಗೋದಾಮಿನಲ್ಲಿದ್ದ ೪ ಲಕ್ಷ ಮೌಲ್ಯದ ೮. ೮೪ ಕೆ.ಜಿ. ಆಹಾರ ಪದಾರ್ಥ ವಶಕ್ಕೆ
ಹುಬ್ಬಳ್ಳಿ: ಇಲ್ಲಿಯ ಗಬ್ಬೂರ ವೃತ್ತದ ಹತ್ತಿರ ಗೋದಾಮಿನಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸುವ ಪೌಷ್ಟಿಕ ವಿವಿಧ ಆಹಾರ ಚೀಲಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ೧೮ ಅಂಗನಾವಡಿ ಕಾರ್ಯಕರ್ತೆಯರು ಸೇರಿ ೨೬ ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವುಕುಮಾರ ದೇಸಾಯಿ, ಬಸವರಾಜ ಬದ್ರಶೆಟ್ಟಿ, ಮಹಮ್ಮದಗೌಸ್ ಕಲಿಪಾ, ಗೌತಮ ಸಿಂಗ್ ಠಾಕೂರ, ಪಕ್ಕಿರೇಶ ಹಲಗಿ, ಕೃಷ್ಣಾ ಮಾದರ, ಶಮಿಮಾ ಬಾನು ಮುಜಾವರ, ಶಮಿಮಾಬಾದು ದಾರುಗಾರ, ಬೇಬಿ ಆಯಿಶಾ ಕಾರಿಗಾರ ಸೇರಿದಂತೆ ಇತರರ ಬಂಧಿಸಲಾಗಿದೆ. ೧೮ ಜನ ಅಂಗನವಾಡಿ ಕಾರ್ಯಕರ್ತರು, ೮ ಜನ ಗೋದಾಮು ಹಾಗೂ ವಾಹನ ಮಾಲೀಕರು ಬಂಧಿಸಿಸಲಾಗಿದೆ. ಗೋದಾಮಿನಲ್ಲಿದ್ದ ೪ ಲಕ್ಷ ಮೌಲ್ಯದ ೮. ೮೪ ಕೆ.ಜಿ. ಆಹಾರ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಶನಿವಾರ ಖಚಿತ ಮಾಹಿತಿ ಆಧರಿಸಿ ವಿವಿಧ ಇಲಾಖೆ ಅಧಿಕಾರಿಗಳ ತಂಡ ಗೋದಾಮಿನ ಮೇಲೆ ಏಕಾಏಕಿ ದಾಳಿ ನಡೆಸಿತು. ಆಗ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸುವ ಆಹಾರ ಪದಾರ್ಥಗಳ ಚೀಲಗಳನ್ನು ಶೇಖರಿಸಿಟ್ಟಿದ್ದು, ಪತ್ತೆಯಾಗಿತ್ತು. ಈ ಕುರಿತು ಮಹಿಳಾ ಹಾಗೂ ಮಕ್ಕಳ ಇಲಾಖೆಯ ಅಧಿಕಾರಿಗಳು ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನೂ ಪ್ರಮುಖ ಆರೋಪಿಗಳ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದರು.