ಆಸ್ತಿಯ ಮೌಲ್ಯ ಕೇಸಿನ ಗುಣಮಟ್ಟ ನಿರ್ಧರಿಸದು

0
25

ಕಾನೂನುಗಳು, ನ್ಯಾಯಾಲಯದ ಪ್ರಕ್ರಿಯೆಗಳು ತಿಳಿಯಲು ಸುಲಭವಲ್ಲದ ಭಾಷಾ ಶೈಲಿಯಲ್ಲಿ ಇರುತ್ತವೆ. ಈ ಅವ್ಯಕ್ತ ಭಯ ಜನಸಾಮಾನ್ಯರನ್ನು ಕಾಡುತ್ತದೆ. ಕನ್ನಡ ಕಾನೂನಿನಲ್ಲಿ ಇತ್ತೀಚೆಗೆ ಹೆಚ್ಚಿಗೆ ಶಬ್ದ ಬೆಳವಣಿಗೆ ಆಗುತ್ತಿದ್ದರೂ ಹಿಂದೆ ಮುಂದೆ, ತಿರುಗ ಮುರುಗ ಓದಿದರೂ ಅರ್ಥವಾಗದೆ ನಿಗೂಢವಾಗಿ ಉಳಿಯುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲಾಗುತ್ತಿಲ್ಲ. ಉನ್ನತ ಶಿಕ್ಷಣ ಪಡೆಯದ, ಅಲ್ಪಜ್ಞಾನಿಗೂ ಕೂಡ ನ್ಯಾಯ ವ್ಯವಸ್ಥೆಯ ನಿಗೂಢತೆ ಬಯಲಾಗುವುದು ಅವಶ್ಯಕ. ಹತ್ತು ಹಲವು ಸಿವಿಲ್, ಕ್ರಿಮಿನಲ್ ಹಾಗೂ ಇತರೆ ಪ್ರಕರಣಗಳನ್ನು ಹೃದಯಕ್ಕೆ ತಟ್ಟುವ ಹಾಗೆ ಹೇಳಿ ಮನಸ್ಸಲ್ಲಿ ಮೂಡಿಸುವ ಅವಶ್ಯಕತೆ ಇದೆ. ಕಠಿಣತೆಯನ್ನು ತೊಡೆದುಹಾಕಿ, ಮಾತೃಭಾಷೆಯಲ್ಲಿ ಸರಳವಾಗಿ ಹೇಳಿದರೆ ಮನದ ಅಂತರಾಳದಲ್ಲಿ ಇಳಿದ ಜ್ಞಾನವು ಭಯ, ಕುತೂಹಲವನ್ನು ತಿಳಿಯಾಗಿಸುತ್ತದೆ. ಕನ್ನಡ ಭಾಷೆಯಲ್ಲಿ ತಿಳಿಯುವ ಹಾಗೆ ಸಾಹಿತ್ಯಕವಾಗಿ ಕಾನೂನು ಮನಮುಟ್ಟುವ ಹಾಗೆ ಸುಲಭವಾಗಿ ಅರ್ಥೈಸುವುದು ಅವಶ್ಯ ಇದೆ. ಯಾವ ನ್ಯಾಯಾಲಯದ ವ್ಯಾಪ್ತಿ ಪರಿಮಿತಿ ಎಷ್ಟು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಗೊಂದಲದ ಗೂಡಾಗಿವೆ. ಕಾನೂನು ನ್ಯಾಯಾಲಯ, ವೈದ್ಯ ವೈದ್ಯಕೀಯ ಶಾಸ್ತ್ರ, ತಂತ್ರಜ್ಞಾನ ತಿಳಿಯುವುದು ಅವಶ್ಯಕತೆ ಇದೆ. ಅಂದಮಾತ್ರಕ್ಕೆ ಎಲ್ಲವನ್ನೂ ಬಲ್ಲವರಾಗಿ ಇರುವುದು ಅಸಾಧ್ಯ. ಆದರೆ ನಮಗೆ ಬೇಕಾದ ಪ್ರಾಥಮಿಕ ಅವಶ್ಯಕತೆಗಳಿಗೆ ಬೇಕಾಗುವಷ್ಟು ಜ್ಞಾನದ ಅರಿವು ಅವಶ್ಯ ಇದೆ. ಈ ನಿಟ್ಟಿನಲ್ಲಿ ಹಲವಾರು ನ್ಯಾಯಾಧೀಶರು, ನ್ಯಾಯವಾದಿಗಳು, ವೈದ್ಯರು, ಇಂಜಿನಿಯರ್, ತಂತ್ರಜ್ಞರು ತಮ್ಮ ಸರಳ ಲೇಖನಗಳಿಂದ ಜನರ ಮನಸ್ಸಿಗೆ ಮುಟ್ಟಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾನೂನಿನ ವಿಷಯದ ಬಗ್ಗೆ ಈ ಲೇಖನಗಳ ಸರಮಾಲೆ ಹೀಗೆ ಸಾಗಿದೆ.
ನ್ಯಾಯಾಲಯದಲ್ಲಿ ಒಬ್ಬ ವ್ಯಕ್ತಿ ತನ್ನ ಹಕ್ಕನ್ನು ಹೇಗೆ ಪ್ರತಿಷ್ಠಿತಗೊಳಿಸಬೇಕು, ಪಡೆಯಬೇಕು, ರುಜುವಾತುಪಡಿಸಿಕೊಳ್ಳಬೇಕು, ವಿಧಾನಗಳು ಏನು ಅನ್ನುವ ಸೋಜಿಗದ ಕುತೂಹಲ ಕಾಡುತ್ತದೆ. ಕಾನೂನು ವಿಷಯ ಅನ್ನುವುದು ಒಂದು ಸಮುದ್ರವಿದ್ದಂತೆ. ಸಮುದ್ರವನ್ನು ದೂರದಿಂದ ನೋಡಿ ಭಯಪಡುವುದಕ್ಕಿಂತ ದಂಡೆಯ ಆಳದಲ್ಲಿ ನಿಂತು ಅಲೆಯ ಸ್ಪರ್ಷದ ಅನುಭೂತಿಯನ್ನು ಪಡೆಯುವ ಹಾಗೆ ಕಾನೂನನ್ನು ಅರಿಯುವುದು ಸಾಧ್ಯ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾನೂನು ಕಬ್ಬಿಣದ ಕಡಲೆ ಅಲ್ಲ. ಕಡಲೆಯನ್ನು ನೆನೆಸಿ ಕುದಿಸಿ ಹದವಾಗಿ ಮೆತ್ತಗಾಗಿಸಿ, ಅದರ ಸವಿಯನ್ನು ಸವಿಯುವ ಹಾಗೆ ಅರಿಯಬಹುದು. ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಮನಮುಟ್ಟುವ ಹಾಗೆ ಸಾಹಿತ್ಯಕವಾಗಿ ಹೇಳಬಹುದು.
ಮೊಟ್ಟಮೊದಲು ಅವನು ನನ್ನ ಕಡೆಗೆ ಬಂದಾಗ ಅವನು ಕೈಯಲ್ಲಿ ಹಿಡಿದುಕೊಂಡು ಬಂದ ಕೋರ್ಟ್ ಸಮನ್ಸ್ ನೋಟಿಸ್‌ಗಳನ್ನು ದೊಡ್ಡ ಭಾರ ಹೊತ್ತುಕೊಂಡು ಹಾಗೆ ಬಂದಿದ್ದನು. ಕೂಡಲು ಹೇಳಿ, ವಿಷಯ ಏನು ಅಂತ ಕೇಳಿದಾಗ, ಹೇಳದೆ ತಡವರಿಸಿ ತತ್ತರಿಸಿದನು. ಕಾಗದಪತ್ರಗಳನ್ನು ಅವನಿಂದ ಪಡೆದುಕೊಂಡೆ. ಭಾರವನ್ನು ಇಳಿಸಿಕೊಳ್ಳುವ ಭಾವ ಅವನ ಮುಖದಲ್ಲಿತ್ತು. ಏನೋ ಹೇಳಲು ಬಂದ. ಮಾತನ್ನು ತುಂಡರಿಸಿ ಸುಮ್ಮನಿರುವಂತೆ ಕಣ್ಣ ಸನ್ನೆಯಲ್ಲಿ ಅವನಿಗೆ ತಾಕೀತು ಮಾಡಿದೆ. ಅವನು ತಂದ ಕಡತವನ್ನು ಓದಿ, ಪರಿಶೀಲಿಸಿ ತಿಳಿದುಕೊಂಡೆ.
ವಾದಿಯು ಈ ದಾವೆಯನ್ನು ಘೋಷಣೆ ಮತ್ತು ಪೂರಕ ಶಾಶ್ವತ ತಡೆಯಾಜ್ಞೆ ಕುರಿತು ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದಾಳೆ. ದಾವೆಯ ಸಂಪೂರ್ಣ ಪಾಠ ಹೀಗಿದೆ. ವಾದಿಯ ತಂದೆ ಇಬ್ಬರು ಅಣ್ಣ-ತಮ್ಮಂದಿರು ತಮ್ಮ ಮನೆತನದ ಜಮೀನು, ಮನೆ ಪಾಲು ಮಾಡಿಕೊಂಡರು. ಪ್ರತಿಯೊಬ್ಬರಿಗೂ ಒಂದೊಂದು ಮನೆ, ವಾದಿಯ ತಂದೆಗೆ ೧೦ ಎಕರೆ ಜಮೀನು ಮತ್ತು ಒಂದು ಮನೆ ಹಾಗೂ ಅವನ ಸಹೋದರನಿಗೆ ೬ ಎಕರೆ ಜಮೀನು ಮತ್ತು ಒಂದು ಮನೆ ಹಿಸ್ಸೆಗೆ ಬಂದವು. ಖಾತೆಗಳು ಬದಲಾವಣೆ ಆದವು. ವಾದಿಯ ತಂದೆ ತನ್ನ ಹೆಂಡತಿ, ವಾದಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ತನ್ನ ವಾರಸುದಾರರೆಂದು ಬಿಟ್ಟು ಮೃತನಾದನು. ವಾದಿಯ ತಾಯಿ ಹಾಗೂ ಉಳಿದ ಮೂವರು ಹೆಣ್ಣು ಮಕ್ಕಳು ಮನೆತನದ ಆಸ್ತಿಯಲ್ಲಿ ತಮ್ಮ ಹಕ್ಕನ್ನು ವಾದಿಯ ಹೆಸರಿಗೆ ಹಕ್ಕು ಬಿಟ್ಟುಕೊಟ್ಟರು. ೧೦ ಎಕರೆ ದಾವೆ ಜಮೀನು, ಮನೆ ವಾದಿಯ ಹೆಸರಲ್ಲಿ ದಾಖಲಾಗಿರುತ್ತದೆ. ವಾದಿಯ ತಂದೆಯ ಸಹೋದರ ಮೃತನಾದ ನಂತರ ಪ್ರತಿವಾದಿಯರು, ೬ ಎಕರೆ ಜಮೀನು, ಮನೆಗೆ ತಮ್ಮ ಹೆಸರುಗಳನ್ನು ದಾಖಲಿಸಿ ಕೊಂಡರು. ಇತ್ತೀಚೆಗೆ ವಾದಿಯು ತನ್ನ ಜಮೀನಿನ ಪಹಣಿ ಪತ್ರಿಕೆಯನ್ನು ಪರಿಶೀಲಿಸಿದಾಗ ಜಮೀನು ವಿಭಾಗವಾಗಿ ಅವಳ ಹೆಸರಿಗೆ ಕೇವಲ ೮ ಎಕರೆ ದಾಖಲಾಗಿ, ಹೊಸ ಪಹಣಿ ಪತ್ರಿಕೆ ಸೃಷ್ಟಿಯಾಗಿ ೨ ಎಕರೆಗೆ ಪ್ರತಿವಾದಿಯರ ಹೆಸರು ದಾಖಲಾಗಿತ್ತು. ವಾದಿಯಿಂದ ರೂ. ೨ ಕೋಟಿ ಆಸ್ತಿ ಲಪಟಾಯಿಸಿದ್ದಾರೆ. ಪ್ರತಿವಾದಿಯರ ತಂದೆ ತನ್ನ ನಡುವೆ ವಿಭಜನೆ ಆಗಿದೆ ಎಂದು ಪಾಲುಪತ್ರ ಸೃಷ್ಟಿಸಿ ವಾದಿಯ ಹೆಸರಿಗೆ ಇರುವ ೧೦ ಎಕರೆ ಜಮೀನಿನಲ್ಲಿ ೨ ಎಕರೆ ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾನೆ. ಪ್ರತಿವಾದಿಯ ತಂದೆ ಮೃತನಾದ ನಂತರ ಪ್ರತಿವಾದಿಯರು ತಮ್ಮ ಹೆಸರುಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿ ದಾವೆ ದಾಖಲಿಸಿದ್ದಾಳೆ.
ಇಷ್ಟು ದಾವೆಯ ಪರಿಪಾಠವನ್ನು ನನ್ನ ಕಕ್ಷಿದಾರನಿಗೆ ವಿವರಿಸಿ ಅವನ ಅಭಿಪ್ರಾಯಕ್ಕೆ ಕಾಯ್ದು ಕುಳಿತೆ.
“ಸರ್, ಸರ್ ನಮ್ಮ ತಂದೆಯ ಮನೆತನದಲ್ಲಿ ಸಮವಾಗಿ ಪಾಲು ಆಗಬೇಕಿತ್ತು. ಆದರೆ ವಾದಿಯ ತಂದೆ ತನ್ನ ಹೆಸರಿಗೆ ೧೦ ಎಕರೆ ಜಮೀನನ್ನು ದಾಖಲಿಸಿಕೊಂಡು ನಂತರ ೨ ಎಕರೆ ಜಮೀನನ್ನು ನನ್ನ ತಂದೆಗೆ ಕೊಡುವುದಾಗಿ ವಾಗ್ದಾನ ಮಾಡಿದ್ದನು. ಇದನ್ನು ಸರಿಪಡಿಸಲು ವಾದಿ ಹಾಗೂ ನಮ್ಮ ತಂದೆ ಕೂಡಿ ನೋಂದಾಯಿತ ಪಾಲು ಪತ್ರ ಮಾಡಿಕೊಂಡರು. ಅದರಂತೆ ೨ ಎಕರೆ ಜಮೀನು ನಮ್ಮ ತಂದೆ ಹೆಸರಿಗೆ ಪ್ರತ್ಯೇಕ ವಾದ ಪಹಣಿ ಪತ್ರಿಕೆ ಆಗಿದೆ. ಎಂಟು ಎಕರೆ ಜಮೀನಿಗೆ ಮಾತ್ರ ಮಾಲೀಕಳು ಇರುತ್ತಾಳೆ. ವಾದಿಯು ತನ್ನ ತಾಯಿ ಸಹೋದರರಿಗೆ ಮೋಸ ಮಾಡಿ ತನ್ನ ಹೆಸರಿಗೆ ಜಮೀನನ್ನು ಕಾನೂನಿನ ಚೌಕಟ್ಟಿನ ದಾಖಲೆ ಇಲ್ಲದೆ ಮಾಡಿಕೊಂಡಿರುತ್ತಾಳೆ. ಅವಳಿಗೆ ಜಮೀನಿನಲ್ಲಿ ಸಂಪೂರ್ಣ ಮಾಲೀಕತ್ವದ ಹಕ್ಕು ಇರುವುದಿಲ್ಲವೆಂದು ಮಾಹಿತಿ ನೀಡಿದ.
ನ್ಯಾಯಾಲಯಕ್ಕೆ, ನನ್ನ ಕಕ್ಷಿದಾರ ಪ್ರತಿವಾದಿಯರ ಪರವಾಗಿ ವಕಾಲತು ಪತ್ರ ಸಲ್ಲಿಸಿ ಕಕ್ಷಿದಾರನ ಹೇಳಿಕೆ ಯಂತೆ ವಿವರವಾಗಿ ಕೈಫಿಯತ್ /ಲಿಖಿತ ತಕರಾರು ಸಲ್ಲಿಸಿದೆ. ವಾದಿಯು ಪ್ರತಿವಾದಿಯರು ತಮ್ಮ ಹಾಗೂ ತಮ್ಮ ಪರ ಸಾಕ್ಷಿದಾರರನ್ನು ಸಾಕ್ಷಿದಾರರ ಹೇಳಿಕೆ ಸಲ್ಲಿಸಿದರು. ಸುದೀರ್ಘವಾದ ವಾದ ಮಂಡನೆ ನಡೆದವು. ತೀರ್ಪಿಗಾಗಿ ಮುಂದೂಡಲಾಯಿತು. ವಾದಿಯು ತಾನು ದಾವಾ ಜಮೀನದ ಸಂಪೂರ್ಣ ಮಾಲೀಕಳು ಎಂದು ಸಿದ್ಧಪಡಿಸಲು ವಿಫಲರಾಗಿದ್ದಾಳೆ. ಯಾರು ತಮ್ಮ ಪರ ತೀರ್ಪಿಗಾಗಿ ಬರುತ್ತಾರೆ, ಅವರು ನಿಷ್ಕಳಂಕವಾಗಿ ತಮ್ಮ ಹಕ್ಕು ಸಾಧಿಸಬೇಕು. ದಾವೆ ಜಮೀನಿನ ಪಹಣಿ ಪತ್ರಿಕೆಯಲ್ಲಿ ಕ್ಷೇತ್ರ ೮ ಎಕರೆ ಮಾತ್ರ ತೋರಿಸುತ್ತಿದೆ. ವಾದಿ ೧೦ ಎಕರೆ ಜಮೀನು ಮಾಲೀಕಳು ಎಂದು ಘೋಷಣೆ ಕೇಳಿದ್ದಾಳೆ. ಪ್ರತಿವಾದಿ ತಂದೆ ಎರಡು ಕೋಟಿ ಮೌಲ್ಯದ ೨ ಎಕರೆ ಜಮೀನು ಲಪಟಾಯಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ ಆಸ್ತಿಯ ಮೌಲ್ಯದ ಬಗ್ಗೆ ಹೆಚ್ಚಿಗೆ ಸದ್ದು ಮಾಡಿದ್ದಾಳೆ. ಅದು ಗಣನೆಗೆ ಬರುವುದಿಲ್ಲ. ಮೊದಲು ವಾದಿ ದಾವೆ ಜಮೀನಿನ ಮಾಲೀಕಳೆಂದು ಸಿದ್ಧಪಡಿಸಬೇಕು. ವಾದಿಯ ತಾಯಿ, ಸಹೋದರಿಯರಿಂದ ನೋಂದಣಿ ಆಗದ ಹಕ್ಕು ಬಿಟ್ಟ ಪತ್ರದ ಆಧಾರದಿಂದ ಹೆಸರು ದಾಖಲಾಗಿದೆ. ಕಂದಾಯ ಪಹಣಿ ಪತ್ರ ಹಕ್ಕುಪತ್ರ ಅಲ್ಲ. ಹೀಗೆ ಅಭಿಪ್ರಾಯ ವ್ಯಕ್ತಪಡಿಸಿ ವಾದಿಯ ದಾವೆ ವಜಾಗೊಳಿಸಿ ನ್ಯಾಯಾಲಯ ತೀರ್ಪು ನೀಡಿತು.
ಅನ್ಯಾಯಕ್ಕೆ ಒಳಗಾದವರ ಕಟ್ಟಕಡೆಯ ನ್ಯಾಯ ವೇದಿಕೆ ನ್ಯಾಯಾಲಯ ಆಗಿದೆ. ನ್ಯಾಯಾಲಯ ನಂ ಬುವುದು ಕಾನೂನುಬದ್ಧ ದಾಖಲೆ ನಂಬುವಂತ ಮೌಖಿಕ ಸಾಕ್ಷಿ. ಸಾಕ್ಷಿದಾರರ ಪ್ರತಿ ಹೇಳಿಕೆಗಳು ವ್ಯಕ್ತಿತ್ವ ಸೂಚಿಸುತ್ತವೆ, ಅವನ ಮಾತುಗಳು ನಂಬಲು ಅರ್ಹ ಅನ್ನುವದು ಮನದಟ್ಟಾಗಬೇಕು. ಆಸ್ತಿಯ ಮೌಲ್ಯ ದೊಡ್ಡದು ಸಣ್ಣದು ಕೇಸಿನ ಗುಣ ನಿರ್ಧರಿಸದು, ಸಾಕ್ಷಿ ಮೌಲ್ಯ ಪರಿಗಣಿಸಲ್ಪಡುತ್ತದೆ.

Previous articleಜನ್ಮಸಿದ್ಧ ಪೌರತ್ವ ರದ್ದು: ಭಾರತೀಯರು ಕಂಗಾಲು
Next articleಧ್ಯಾನದಲ್ಲಿ ಆಲೋಚನೆಗಳು