ಹುಬ್ಬಳ್ಳಿ : ಈ ಭಾನುವಾರ ಎಲ್ಲ ಭಾನುವಾರಗಳಂತಿರದೇ ನಗರದ ಜನರಿಗೆ ಸ್ವಲ್ಪ ವಿಭಿನ್ನ ಭಾನುವಾರವಾಗಿತ್ತು.
ಬೆಳ್ಳಂ ಬೆಳಿಗ್ಗೆ ಕಿತ್ತೂರು ಚನ್ನಮ್ಮ ವೃತ್ತದಿಂದ ಸಾವಿರಾರು ಜನ, ಉತ್ಸಾಹಿ ಯುವಕರು, ವಿದ್ಯಾರ್ಥಿಗಳು ಅಷ್ಟೇ ಏಕೆ ಕೆಲ ಗಣ್ಯ ಮಾನ್ಯರೂ ಓಡಿದರು.
ಪೊಲೀಸರು ಓಡುತ್ತಿದ್ದಂತೆಯೇ ಜನ ಓಡಿದ್ರು… ಓಡಿದ್ರು.. ಓಡ್ತಾನೆ ಇದ್ರು..
ಒಂದಲ್ಲ, ಎರಡಲ್ಲ 5 ಕೀ ಮಿ, 10:ಕಿ.ಮೀ ಓಡಿಯೇ ಬಿಟ್ಟರು ನೋಡಿ!
ಹೀಗೆ ಇವರು ಓಡಿದ್ದು ಪೊಲೀಸರಿಗೆ ಹೆದರಿ ಅಲ್ಲ; ಬದಲಾಗಿ ಆರೋಗ್ಯಕ್ಕಾಗಿ, ಮಾದಕ ವಸ್ತುಗಳ ದುಷ್ಪರಿಣಾಮ ಜಾಗೃತಿಗಾಗಿ.!
ಮಾದಕ ವಸ್ತುಗಳ ವ್ಯಸನದಿಂದ ಬದುಕಿನ ಕನಸು ವಿನಾಶ, ವ್ಯಸನ ಮುಕ್ತ ಜೀವನವೇ ಸುಂದರ ಮಯ ಜೀವನ, ಅಡಿಕ್ಷನ್ ಸ್ಟೀಲ್ಸ್ ಸಮ್ ಆಫ್ ಬ್ಯುಟಿಫುಲ್ ಸೌಲ್ಸ್ ಹೀಗೆ ಮಾದಕ ವಸ್ತುಗಳ ದುಷ್ಪರಿಣಾಮ ಜಾಗೃತಿ ಸಂದೇಶ ಫಲಕಗಳು ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದ ಎಲ್ಲರ ಕೈಯಲ್ಲೂ ರಾರಾಜಿಸಿದವು
ಈವರೆಗೆ ಮಹಾನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಅಕ್ರಮ ಸಾಗಾಟ, ಡ್ರಗ್ಸ್ ಪೆಡ್ಲರ್ ಗಳ ವಿರುದ್ಧ ಸಮರ ಸಾರಿದ್ದ ಪೊಲೀಸ್ ಆಯುಕ್ತರು ಮತ್ತು ಅವರ ಸಿಬ್ಬಂದಿ ವ್ಯಸನಿಗಳಿಗೆ, ಅವರ ಕುಟುಂಬಕ್ಕೆ ಜಾಗೃತಿ ಮೂಡಿಸಿದ್ದರು.
ಈ ರವಿವಾರ ಪೊಲೀಸ್ ಇಲಾಖೆಯ ರಾಜ್ಯವ್ಯಾಪಿ ಕೈಗೊಂಡ ಪೊಲೀಸ್ ರನ್ ಮ್ಯಾರಾಥಾನ್ ಓಟದ ಇವೆಂಟ್ ನ್ನು ಮಾದಕ ವಸ್ತು ದುಷ್ಪರಿಣಾಮ ಜಾಗೃತಿಗೆ ಅರ್ಥಪೂರ್ಣವಾಗಿ ಬಳಸಿಕೊಂಡಿತು.
ಹುಬ್ಬಳ್ಳಿ – ಧಾರವಾಡ ಮಹಾನಗರ ಪೊಲೀಸ್ ಕಮೀಶನರೇಟ್,ಧಾರವಾಡ ಜಿಲ್ಲಾ ಪೊಲೀಸ್ ಜಂಟಿಯಾಗಿ ಸಾರ್ವಜನಿಕ ಸಂಘ ಸಂಸ್ಥೆ,ಜನಪರ ಸಂಘಟನೆ ಗಳ ಸಹಕಾರದಲ್ಲಿ ಆಯೋಜಿಸಿದ್ದ ಮ್ಯಾರಾಥಾನ್ ಗೆ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರಿಂದ ಭಾರಿ ಸ್ಪಂದನೆ ಲಭಿಸಿತು.
ಕಿತ್ತೂರು ಚನ್ನಮ್ಮ ವೃತ್ತದಿಂದ ತೋಳನಕೆರೆವರೆಗೆ 5 ಕೀ.ಮಿ ಹಾಗೂ ಪ್ರೆಸಿಂಡೆಟ್ ಹೊಟೇಲ್ ವೃತ್ತದಿಂದ ತೋಳನಕೆರೆ ವರೆಗೆ 10 ಕೀ.ಮಿ ಓಟ ಎರಡು ಭಾಗದಲ್ಲಿ ಮ್ಯಾರಾಥಾನ್ ಆಯೋಜಿಸಿತ್ತು
ನಾಗರಿಕ, ಮೀಸಲು ಪಡೆ, ಸಂಚಾರ ಪೊಲೀಸ್ ಸೇರಿದಂತೆ ಸಾವಿರಾರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಮ್ಯಾರಾಥಾನ್ ನಲ್ಲಿ ವಿಜೇತರಿಗೆ ಬಹುಮಾನ ವಿತರಣೆ ತೋಳನಕೆರೆ ವೃತ್ತದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಅತಿಥಿ ಉದ್ಯಮಿ ಡಾ.ವಿ.ಎಸ್ ವಿ ಪ್ರಸಾದ್, ಹುಡಾ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ, ವಸಂತ ಹೊರಟ್ಟಿ, ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್ ಕಮ್ಮಾರ ಮಾತನಾಡಿ, ಮಹಾನಗರ ಮತ್ತು ಜಿಲ್ಲಾ ಪೊಲೀಸ್ ಸಾರ್ವಜನಿಕರ ಆರೋಗ್ಯ ರಕ್ಷಣೆ, ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಮ್ಯಾರಾಥಾನ್ ಆಯೋಜನೆ ಅರ್ಥಪೂರ್ಣ. ಇಂತಹ ಕಾರ್ಯಕ್ರಮ ಹೆಚ್ಚು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಮಹಾನಗರ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಗಾಕೋಡ್ ಮಾತನಾಡಿದರು.
ಡಿಸಿಪಿಗಳಾದ ಮಹಾನಿಂದ ನಂದಗಾವಿ, ಸಿ.ಆರ್ ರವೀಶ್ ಹಾಗೂ ಇತರ ಅಧಿಕಾರಿಗಳಿದ್ದರು.