ದಾವಣಗೆರೆ: ಭಾರತೀಯ ಯೋಧರು ಉಗ್ರಗ್ರಾಮಿಗಳ ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರ ಹುಟ್ಟಡಗಿಸಿದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾದ್ಯಂತ ವಿಜಯೋತ್ಸವ ಆಚರಿಸಲಾಯಿತು.
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಾರತೀಯ ಸೇನೆಯ ಜೊತೆಗೆ ಭಾರತೀಯರಿದ್ದೇವೆ, ಅವರಿಗೆ ಭಗವಂತ ಎಲ್ಲಾ ರೀತಿಯ ಶಕ್ತಿ ಸಿಗಲಿ, ಯುಕ್ತಿ, ಸಮರ್ಥವಾಗಿ ಉಗ್ರರನ್ನು ದಮನ ಮಾಡುವ ಶಕ್ತಿ, ಅವರ ಜೀವಕ್ಕೆ ಯಾವುದೇ ರೀತಿಯ ಹಾನಿಯಾಗದಿರಲಿ ಎಂದು ಪ್ರಾರ್ಥಿಸಲಾಯಿತು.
ಜಿಲ್ಲಾ ಬಿಜೆಪಿ ಕಾರ್ಯಕರ್ತರು, ಮಾಜಿ ಸೈನಿಕರು ಮತ್ತು ಸಾರ್ವಜನಿಕರು ಸೇರಿ ನಗರದ ರಾಮ್ ಅಂಡ್ ಕೋ ವೃತ್ತದ ವಿನಾಯಕ ದೇವಾಲಯದಲ್ಲಿ ಭಾರತದ ಧ್ವಜವಿಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಮ್ಮ ಭಾರತೀಯ ಸೈನಿಕರ ಆತ್ಮಶಕ್ತಿ ಹೆಚ್ಚಿಸುವ, ಆತ್ಮಸ್ಥೈರ್ಯ, ಮನೋಬಲ ಹೆಚ್ಚಿಸುವ ಮೂಲಕ ಅವರ ಜೀವಗಳನ್ನು ಕಾಪಾಡುವಂತೆ ಭಕ್ತಿಯಿಂದ ದೇವರ ಮೊರೆ ಹೋದರು. ನಾಗರಿಕರಿಗೆ ತೊಂದರೆ ಮಾಡದೆ ಉಗ್ರರ ಅಡಗು ತಾಣಗಳಿಗೆ ನಿಖರ ಗುರಿಯಿಟ್ಟು ಉಗ್ರರ ಸದೆ ಬಡಿದ ಸೈನಿಕರಿಗೆ ಜಯವಾಗಲಿ, ಪಾಕಿಸ್ತಾನ ಪುಡಿ, ಪುಡಿ ಎಂದು ಘೋಷಣೆ ಮೊಳಗಿಸಿದರು.
ಪಟಾಕಿ ಸಿಡಿಸಿ ಸಂಭ್ರಮ:
ಪೂಜೆ ಮುಗಿಸಿದ ನಂತರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮಾಜಿ ಸೈನಿಕರು ಮತ್ತು ಸಾರ್ವಜನಿಕರು, ಭಾರತೀಯ ಮಿಲಿಟರಿ ಪಡೆಗೆ ಜೈಕಾರ ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು, ಕನ್ನನ್ ದೇವನ್ ಟೀ, ಪಾಕಿಸ್ತಾನ ಪುಡಿ ಪುಡಿ, ಪಾಪಿ ಪಾಕಿಸ್ತಾನ… ಸೇರಿದಂತೆ ಅನೇಕ ಘೋಷಣೆಗಳನ್ನು ಮೊಳಗಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ‘ನಮ್ಮ ಭಾರತೀಯ ಯೋಧರು ಯಾವ ಸಾರ್ವಜನಿಕರಿಗೂ ತೊಂದರೆ ಮಾಡದೆ ನಿಖರ ಗುರಿಯಿಟ್ಟು ಉಗ್ರರನ್ನು ಸೆದೆ ಬಡಿದಿದೆ. ಭಾರತದ ತಂಟೆಗೆ ಬಂದರೆ ಏನಾಗಲಿದೆ ಎಂಬುದನ್ನು ನಮ್ಮ ಸೈನಿಕರು ಉಗ್ರಗ್ರಾಮಿಗಳಿಗೆ ತೋರಿಸಿದ್ದಾರೆ. ಅಂತಹ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಮತ್ತು ಅವರ ಜೀವಗಳ ರಕ್ಷಣೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸೈನಿಕರ ಜತೆ ನಾವು ಇದ್ದೇವೆ, ಅಮಾಯಕ ಸಾರ್ವಜನಿಕರನ್ನು ಬಲಿ ಪಡೆಯುವ ಉಗ್ರರನ್ನು ಸದೆ ಬಡಿಯಬೇಕು’ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಕೊಳೇನಹಳ್ಳಿ ಸತೀಶ್, ಅತೀಥ್ ಅಂಬರ್‌ಕರ್, ಶಿವನಹಳ್ಳಿ ರಮೇಶ್, ಶ್ರೀನಿವಾಸ್, ಗೌತಮ್ ಜೈನ್, ರಮೇಶ್ ಇತರರು ಇದ್ದರು.