ಘಟಪ್ರಭಾ: ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯನ್ನು ಸಕಾಲಕ್ಕೆ ಕಾಪಾಡಿ ಆಸ್ಪತ್ರೆಗೆ ಸೇರಿಸಿದರೂ ಆಸ್ಪತ್ರೆಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ಘಟಪ್ರಭಾದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಶಿಂಧಿಕುರಬೆಟ್ಟ ಗ್ರಾಮದ ದಸ್ತಗೀರ ಪನಿಬಂದ(೪೨) ಎಂದು ತಿಳಿದು ಬಂದಿದ್ದು, ಹೂವಿನ ವ್ಯಾಪಾರಿಯಾಗಿರುವ ಆತ ಕೆಲವು ದಿನಗಳಿಂದ ಮಾನಸಿಕ ಅಸ್ಪಸ್ತನಾಗಿದ್ದು, ನ. ೨೩ರಂದು ಸಂಜೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದಾಗ ಕೂಡಲೆ ಕಾಪಾಡಿ ಘಟಪ್ರಭಾದಲ್ಲಿರುವ ಕರ್ನಾಟಕ ಆರೋಗ್ಯಧಾಮಕ್ಕೆ ಸೇರ್ಪಡೆ ಮಾಡಿದ್ದರು. ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನ. ೨೫ರಂದು ಬೆಳಿಗ್ಗೆ ೬ಗಂಟೆ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯ ಕಣ್ಣು ತಪ್ಪಿಸಿಕೊಂಡು ತಾನು ದಾಖಲಾಗಿರುವ ಎಮರ್ಜೆನ್ಸಿ ವಾರ್ಡ್ ಪಕ್ಕದಲ್ಲಿರುವ ಬಾವಿಗೆ ಜಿಗಿದು ಜೀವ ಕಳೆದುಕೊಂಡಿದ್ದಾನೆ. ಕೆಲವರ ಕಣ್ಣೆದುರೆ ಘಟನೆ ನಡೆದರೂ ಬಾವಿ ಆಳವಾಗಿರುವುದರಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತ ವ್ಯಕ್ತಿ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.