ಆಡಿದರೆ ಆಡದಂತಿರಬೇಕು…

0
10

ಮಾತು ಆಡಿದರೆ ಆಡದಂತಿರಬೇಕು… ನೋಡಿದರೆ ನೋಡದಂತಿರಬೇಕು. ಜಗಳವಾಡಿದರೆ ಜಗಳವಾಡದಂತಿರಬೇಕು ಅಂದಾಗ ಮಾತ್ರ ಅಂತರಂಗ ಶುದ್ಧಿ-ಬಂದಿದೆ ಬುದ್ಧಿ ಅಂದುಕೊಳ್ಳಬೇಕು ಎಂದು ಖ್ಯಾತ ಮಿದುಳು ವೈದ್ಯ ಡಾ. ತಿಗಡೇಸಿ ಭಯಂಕರ ಭಾಷಣ ಮಾಡುತ್ತಿದ್ದ. ಇತ್ತಿಚಿಗೆ ಅನ್ನುವುದು ಆಡುವುದು ಹೆಚ್ಚಾಗಿರುವ ಕಾರಣ ಎಲ್ಲರ ಸಭೆ ಕರೆದ. ಸಭೆಯಲ್ಲಿ ನಾಡಿನ ದೊಡ್ಡವರು, ಸಣ್ಣವರು, ಅವರು, ಇವರು ಎಲ್ಲರೂ ಸೇರಿದ್ದರು. ನೋಡಿ… ದೇವರು ಬಾಯಿ ಕೊಟ್ಟಿದ್ದೇ ಅನ್ನುವುದಕ್ಕೆ. ಅನ್ನಿ ಯಾರೂ ಬೇಡ ಅನ್ನುವುದಿಲ್ಲ. ಆದರೆ ಅಂದರೂ ಅನ್ನದ ಹಾಗೆ ಅನ್ನಿ. ಈಗ ಕಾಲ ಹೇಗಿದೆ ಅಂದರೆ… ಇಲಿ ಹೋಯಿತು ಅಂದರೆ ಹುಲಿ ಡಾನ್ಸ್ ಮಾಡಿಕೊಂಡು ಹೋಯಿತು ಎಂದು ಹೇಳುವವರಿದ್ದಾರೆ. ಯಾರಾದರೂ ಹಾಗೆ ಅಂದರೆ ಹೌದು ಬಿಡಿ… ಹುಲೀನೂ ಡಾನ್ಸ್ ಕಲೀತಲ್ಲ ಎಂದು ಸಮಾಧಾನ ಪಟ್ಟುಕೊಂಡು ಸುಮ್ಮನಿದ್ದು ಬಿಡಬೇಕು. ಈಗ ಸೋದಿ ಮಾಮಾನ ವಿರುದ್ಧ ಯರ‍್ಯಾರು ಏನೇನೋ ಅನ್ನುತ್ತಾರೆ. ಅವರೂ ವಾಪಸ್ ಅನ್ನುತ್ತಾರೆ. ವಾಪಸ್ ಅಂದರಲ್ಲ ಎಂದು ಇವರು ಮತ್ತೆ ಅನ್ನುತ್ತಾರೆ. ಓಹೋ ಅವರು ಅಂದರಲ್ಲ ಅಂತ ಇವರು ಮತ್ತೆ ಏನೇನೋ ಅನ್ನುತ್ತಾರೆ. ಹೀಗೆ ಅನ್ನುವುದು ಆಡುವುದು ಭಯಂಕರ ಆಗುತ್ತೆ. ಕೆಲವೊಬ್ಬರು ಔಷಧಿ ಸೇವಿಸಿ ಅನ್ನುತ್ತಾರೆ. ಹಾಗೆ ಮಾಡಿದರೆ ಭಾರೀ ಇದು ಆಗುತ್ತದೆ. ನನ್ನ ಅಭಿಪ್ರಾಯ ಎಂದರೆ ಔಷಧಿ ಸೇವಿಸಿದರೂ ಸೇವಿಸದಂತೆ ಇರಬೇಕು. ಅಂದಾಗ ಮಾತ್ರ ಔಷಧಿಗೂ ಬೆಲೆ ಇವರಿಗೂ ಗೌರವ. ಇತ್ತೀಚಿಗೆ ಔಷಧಿ ತುಟ್ಟಿ ಎಂದು, ತುಟ್ಟಿ ಮಾಡಿದವರಿಗೆ ಏನೇನೋ ಅನ್ನುತ್ತಾರೆ.
ಅನ್ನಿಸಿಕೊಂಡವರೂ ಸುಮ್ಮನೇ ಕೂಡದೇ ಅವರೂ ಅನ್ನುತ್ತಾರೆ. ಈ ಅನ್ನುವುದು, ಅನ್ನಿಸಿಕೊಳ್ಳುವುದು ಪುರಾಣ ಕಾಲದಿಂದಲೂ ಇದೆ. ಈಗ ಕಾಲ ಬದಲಾಗಿದೆ. ಹಾಗಾಗಿ ಅಂದರೂ ಅನ್ನದ ಹಾಗೆ ಅನ್ನಿ ಅಂತ ನಾನು ಹೇಳುವುದು. ಈಗ ನಿಮ್ಮೆಲ್ಲರ ತಲೆಗೆ ಹೋಯಿತು ಎಂದು ತಿಳಿದುಕೊಂಡಿದ್ದೇನೆ. ಇಷ್ಟು ಹೇಳಿ ನನ್ನ ಭಾಷಣ ಮುಗಿಸುತ್ತೇನೆ ಎಂದು ವೇದಿಕೆ ಇಳಿದ. ಕುಳಿತ ಜನರೆಲ್ಲ… ಇವನ್ಯಾವನಿವ? ಏನೇನೋ ಅಂತಾನೆ ಎಂದು ತಿಗಡೇಸಿ ಬಗ್ಗೆಯೇ ಅನ್ನತೊಡಗಿದರು.

Previous articleಮತ್ತೆ ಮೋದಿಗೆ ಅಧಿಕಾರ ಉಳಿದದ್ದು: ಹಳೆಯದೇ
Next articleರುದ್ರಾಕ್ಷಿ ಮಹಿಮೆ