ಹುಬ್ಬಳ್ಳಿ: ಸಿದ್ದರಾಮಯ್ಯ, ನಾನು ಜನತಾ ಪರಿವಾರದಿಂದ ಬಂದವರು. ಮುಡಾ ಹಗರಣದಲ್ಲಿ ಆರಂಭದಲ್ಲಿಯೇ ತಪ್ಪು ಒಪ್ಪಿಕೊಂಡಿದ್ದರೆ ಸಿಎಂಗೆ ಈ ಸ್ಥಿತಿ ಬರುತ್ತಿದ್ದಿಲ್ಲ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದ ಸದ್ಗುರು ಸಿದ್ಧಾರೂಢಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರಂತಹ ನಾಯಕರಿಗೆ ಇದು ಶೋಭೆ ತರುವುದಿಲ್ಲ, ಒಂದು ತಪ್ಪು ಮಾಡಲು ಹೋಗಿ ಹತ್ತಾರು ತಪ್ಪು ಮಾಡಿದ್ದಾರೆ. ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಳ್ತಾರೆ. ಅವರು ಯಾರ ಮಾತನ್ನೂ ಕೇಳಲಿಲ್ಲ. ಅದೆಲ್ಲ ಆಗೋಗಿದೆ. ಆತ್ಮಸಾಕ್ಷಿ ಅಂತೆಲ್ಲ ಮಾತನಾಡುವ ಬದಲು ಅವತ್ತೇ ಬಗೆಹರಿಸಿದ್ರೆ ಇವೆಲ್ಲ ಬರುತ್ತಿರಲಿಲ್ಲ ಎಂದರು.