ಅರ್ಜಿ ಸಲ್ಲಿಸಿದರೂ ಜಾಗ ನೀಡಿಲ್ಲ

ಬೆಂಗಳೂರು: ಖರ್ಗೆಯವರ ಟ್ರಸ್ಟ್‌ಗೆ ಭೂಮಿ ನೀಡುವ ವಿಚಾರದಲ್ಲಿ ಲೋಪ ಆಗಿ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಹಾಗೂ ನಿಯಮ ಉಲ್ಲಂಘಿಸಿ ಐದು ಎಕರೆ ಜಮೀನನ್ನು ಖರ್ಗೆ ಕುಟುಂಬದ ಸದಸ್ಯರ ಟ್ರಸ್ಟ್‌ ಗೆ ನೀಡಲಾಗಿದೆ. ಏರೋಸ್ಪೇಸ್ ಟೆಕ್ ಪಾರ್ಕ್‌ನಲ್ಲಿ ನಿವೇಶನ ನೀಡುವಂತೆ 71 ಮಂದಿ ಶೋಷಿತರು ಅರ್ಜಿ ಸಲ್ಲಿಸಿದರೂ ಜಾಗ ನೀಡಿಲ್ಲ. ಹಣ ಪಾವತಿಸಿ ಎರಡು ವರ್ಷ ಕಳೆದರೂ ಭೂಮಿ ಸಿಕ್ಕಿಲ್ಲ. ಆದರೆ, ಖರ್ಗೆ ಕುಟುಂಬಕ್ಕೆ ಭೂಮಿ ಸಿಕ್ಕಿದ್ದು ಹೇಗೆ? ನೊಂದ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸುವವರು ಯಾರು? ಸೈಟು ಹಂಚಿಕೆ ಪ್ರಕ್ರಿಯೆ ಒಂದೇ ತಿಂಗಳಲ್ಲಿ ಮುಗಿದಿದೆ. ಒಂದೇ ಕುಟುಂಬದ ಐವರಿಗೆ ಸೈಟು ಹಂಚಿಕೆ ಆಗಿದೆ. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.