ಕೋಲಾರ: ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಇಲಾಖೆ ತೆರವುಗೊಳಿಸಿದ್ದ ಜಮೀನನ್ನು ಮರು ಒತ್ತುವರಿ ಮಾಡಿಕೊಂಡಿದ್ದ ರೈತರ ವಿರುದ್ಧ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ಭಾನುವಾರ ಪೊಲೀಸರು ತೆರಳಿದ ಸ್ಥಳಕ್ಕೆ ತೆರಳಿದ್ದ ವೇಳೆ ಸಂಘರ್ಷ ಉಂಟಾಗಿದೆ.
ಕಳೆದ ಒಂದುವರೆ ವರ್ಷದ ಹಿಂದೆ ಅರಣ್ಯ ಇಲಾಖೆ ಕೇತಗಾನಹಳ್ಳಿ ಗ್ರಾಮದ ಜಮೀನುಗಳನ್ನು ರೈತರಿಂದ ತೆರವುಗೊಳಿಸಿತ್ತು. ಈ ಸಂಬಂಧ ಹೈಕೋರ್ಟ್ ತಮ್ಮ ಪರವಾಗಿ ಆದೇಶ ನೀಡಿದೆ ಎಂದು ಹೇಳಿಕೊಂಡು ರೈತರು ಏಪ್ರಿಲ್ 5ರಂದು ತೆರವುಗೊಳಿಸಿದ್ದ ಜಮೀನನ್ನು ಮತ್ತೆ ಪ್ರವೇಶಿಸಿ 100 ಎಕರೆ ಜಮೀನು ಉಳುಮೆಗೆ ಪ್ರಯತ್ನ ಮಾಡಿದಾಗ ಅದನ್ನು ತಡೆದು 13 ಜನರ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ದಾಖಲು ಮಾಡಿತ್ತು.
ಭಾನುವಾರ ಆರೋಪಿಗಳನ್ನು ಬಂಧಿಸಿ ಮತ್ತು ಉಳುಮೆಗೆ ಬಳಸಿದ್ದ ಟ್ರ್ಯಾಕ್ಟರ್‌ಗಳನ್ನ ಸೀಜ್ ಮಾಡಿಕೊಳ್ಳಲು ಹೋದಾಗ ಅದಕ್ಕೆ ಗ್ರಾಮಸ್ಥರು ವಿರೋಧ ಪಡಿಸಿದರು. ಈ ಮಧ್ಯೆ ಇಬ್ಬರ ನಡುವೆ ಜಟಾಪಟಿ ನಡೆದು ಮೂರು ಟ್ರ್ಯಾಕ್ಟರ್ ಸೀಜ್ ಮಾಡಿ ಅರಣ್ಯ ಇಲಾಖೆ ಜಿಲ್ಲಾ ಕೇಂದ್ರ ಕಚೇರಿಗೆ ರವಾನಿಸಿತು. ಇಬ್ಬರು ರೈತರನ್ನು ದಸ್ತಗಿರಿ ಮಾಡಿ ಶ್ರೀನಿವಾಸಪುರ ಪೊಲೀಸರ ವಶಕ್ಕೆ ಕೊಟ್ಟರು.
ಪ್ರತಿಭಟನೆ ವೇಳೆ ಕೆ.ಎಂ. ನಾಗರಾಜ್ ಎಂಬುವರು ಹೆದ್ದಾರಿಯಲ್ಲಿ ಬಂದು ರಸ್ತೆ ತಡೆ ಮಾಡಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಪ್ರಯತ್ನ ಮಾಡಿದರು. ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಅನಾಹುತ ಆಗದಂತೆ ತಡೆದರು. ಗ್ರಾಮಸ್ಥರ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು ಬೆಂಬಲ ನೀಡಿದ್ದರು.