ಬೆಂಗಳೂರು: ಅರಣ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಬೆಂಗಳೂರಿನಲ್ಲಿ ನಾಳೆ ಮುಖ್ಯಮಂತ್ರಿ ಪದಕ ನೀಡಿ, ಗೌರವಿಸಲಾಗುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ, ಅರಣ್ಯ ಇಲಾಖೆಗೆ ಹೊಸದಾಗಿ ಆಯ್ಕೆಯಾಗಿರುವ 267 ಅರಣ್ಯ ವೀಕ್ಷಕರಿಗೂ ನಾಳೆ ನೇಮಕಾತಿ ಪತ್ರ ನೀಡಲಾಗುತ್ತದೆ, ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಕೃಷಿ , ಅರಣ್ಯ ನಿರ್ವಹಣೆ , ತರಬೇತಿ, ಸಂಶೋಧನೆ, ಕಾರ್ಯಯೋಜನೆ ಅಭಿವೃದ್ಧಿ ಕಾರ್ಯ , ನಾವೀನ್ಯ ಪೂರ್ಣ ಉಪಕ್ರಮಗಳ ಅಳವಡಿಕೆ ಸೇರಿದಂತೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 25 ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಲಾಗುತ್ತದೆ. ವಿವಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ 25 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪ್ರತಿವರ್ಷ ಗುರುತಿಸಿ 2017ರಿಂದ ಮುಖ್ಯಮಂತ್ರಿಗಳ ಪದಕ ನೀಡಲಾಗುತ್ತಿದೆ ಎಂದರು.