ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಅಮಿತ್ ಶಾ ಭೇಟಿ ಸಂಚಲನ ಮೂಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆದರ್ಶನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಗಟ್ಡಿಯಾಗಿದೆ. ಶಕ್ತಿಯುತವಾಗಿದೆಮ ಅದಕ್ಕೆ ಇನ್ನಷ್ಟು ಹುರುಪು, ಹುಮ್ಮಸ್ಸು ತುಂಬುವ ಕೆಲಸ ಅಮಿತ್ ಶಾ ಮಾಡಿದ್ದಾರೆ ಎಂದರು.
ಸಾರ್ಜನಿಕರಲ್ಲಿರುವ ಭಾವನೆಗಳು ಅವರ ಎಲ್ಲಾ ಸಭೆಗಳಲ್ಲೂ ವ್ಯಕ್ತವಾಗುತ್ತಿದೆ. ಜಮರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಷ್ಟೇ ಅಲ್ಲ. ಹುರುಪು, ಹುಮ್ಮಸ್ಸು ಎದ್ದು ಕಾಣುತ್ತದೆ. ಇದು ನಮ್ಮ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವ ಭರವಸೆ ಮೂಡಿಸಿದೆ. ಪಕ್ಷದ ಸಂಘಟನೆಯೂ ತಳಮಟ್ಟದಲ್ಲಿ ಸದೃಢವಾಗಿದೆ ಎಂದು ಹೇಳಿದರು.
ಅಮಿತ್ ಶಾ ಅವರು ರಾಜ್ಯ ನಾಯಕರಿಗೆ ವಿಶೇಷ ಸೂಚನೆಗಳನ್ನೇನೂ ನೀಡಿಲ್ಲ. ಎಲೆಕ್ಷನ್ ತಯಾರಿ ಮಾಡಿಕೊಳ್ಳಲು ಸೂಚಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿ ಒಂದುವರೆ ವರ್ಷ. ಈ ಅವಧಿಯಲ್ಲಿ ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ನನ್ನ ಬಗ್ಗೆ ಇಲ್ಲ ಸಲ್ಲದ ಪದ ಬಳಸಿ ಆರೋಪ ಮಾಡಿದಾಗಲೂ ಸಂಯಮದಿಂದಲೇ ಉತ್ತರಿಸಿದ್ದೇನೆ. ವೃತಾ ಅರೋಪ, ಟೀಕೆ ಟಿಪ್ಪಣಿ ಮಾಡಿಲ್ಲ ಎಂದರು.
ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ, ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುತ್ತೇವೆ. ವಿಷಯಾಧಾರಿತ, ಅಭಿವೃದ್ಧಿಯಾಧಾರಿತವಾಗಿ ರಾಜಕಾರಣ ಮಾಡುತ್ತೇವೆ ಎಂದರು.
ಆದರೆ, ಕಾಂಗ್ರೆಸ್ ಪಕ್ಷದವರು ಹತಾಶೆಗೊಂಡಿದ್ದಾರೆ. ಅವರ ಮಾತಿನಲ್ಲಿಯೇ ಅದು ವ್ಯಕ್ತವಾಗುತ್ತಿದೆ ಎಂದರು.
ಯಾವುದೇ ಭಿನ್ನಾಭಿಪ್ರಾಯವಿಲ್ಲ
ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅದಕ್ಕೆ ಆಸ್ಪದ ನೀಡದೇ ಪಕ್ಷದ ವೇದಿಕೆಯಲ್ಲಿಯೆ ಕುಳಿತು ಚರ್ಚೆ ಮಾಡಿ ಪರಿಹರಿಸಿಕೊಳ್ಳಲಾಗುತ್ತದೆ ಎಂದರು.
ಮಂಡ್ಯ ಉಸ್ತುವಾರಿ ಆರ್ ಅಶೋಕ ಅವರಿಗೆ ನೀಡಿದ್ದಕ್ಕೆ ಗೋ ಬ್ಯಾಕ್ ಚಳವಳಿ ನಡೆದಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಇದೆಲ್ಲ ದೃಶ್ಯ ಮಾಧ್ಯಮಗಳಲ್ಲಿ ದೊಡ್ಡದಾಗಿ ತೋರಿಸುತ್ತಿರುವುದಷ್ಟೇ ಎಂದು ಪ್ರತಿಕ್ರಿಯಿಸಿದರು.