ಅಮಾನವೀಯ ಹತ್ಯಾಕಾಂಡವನ್ನು ಉಗ್ರವಾಗಿ ಖಂಡಿಸೋಣ

0
29

ದಾವಣಗೆರೆ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇದೊಂದು ಅಮಾನವೀಯ ಹತ್ಯಾಕಂಡವನ್ನು ನಾವೆಲ್ಲರೂ ಉಗ್ರವಾಗಿ ಖಂಡಿಸುವ ಮೂಲಕ ಭಯೋತ್ಪಾದನೆಯನ್ನು ವಿರೋಧಿಸಬೇಕಾಗಿದೆ ಎಂದು ನಾಡೋಜ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕರೆ ನೀಡಿದರು.
ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂವಿಧಾನ ಸಂರಕ್ಷಣಾ ಪಡೆ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಒಂದು ಕಡೆ ಭಯೋತ್ಪಾದನೆ ಇದೆ, ಇನ್ನೊಂದು ಕಡೆ ದ್ವೇಷದೋತ್ಪಾದನೆ ಇದೆ, ಮತ್ತೊಂದು ಕಡೆ ಪ್ರಪಂಚದಲ್ಲಿ ಯುದ್ಧದೋತ್ಪಾದನೆ ಇದೆ. ಯುದ್ಧದೋತ್ಪಾದನೆಯೂ ನಮಗೆ ಬೇಡ, ಭಯೋತ್ಪಾದನೆಯೂ ನಮಗೆ ಬೇಡ, ದ್ವೇಷದೋತ್ಪಾದನೆಯೂ ನಮಗೆ ಬೇಡ. ಏಕೆಂದರೆ ಈ ಮೂರು ಹಿಂಸೆಯನ್ನು ಉಂಟು ಮಾಡುತ್ತಿವೆ. ಜನರಿಗೆ ಹಿಂಸೆಯನ್ನು ಕೊಡುತ್ತಿವೆ. ಜನರಿಗೆ ಭಯವನ್ನು ಉಂಟು ಮಾಡುತ್ತಿವೆ. ಜನರ ಸಾವನ್ನು ಬಯಸುತ್ತಿವೆ. ಹೀಗಾಗಿ ಈ ಮೂರನ್ನು ಖಂಡಿಸಬೇಕು, ವಿರೋಧಿಸಬೇಕೆಂದರು.
ಇಂತಹ ಅಮಾನವೀಯ ಘಟನೆ ನಡೆದ ಬಳಿಕ ಏನೆಲ್ಲ ನಡೆದವು ಎಂಬುದನ್ನೂ ನಾವು ಮನಗಾಣಬೇಕಾಗಿದೆ. ಕರ್ನಾಟಕದ ಪಲ್ಲವಿ ಎಂಬುವರು ತನ್ನ ಪತಿಯನ್ನು ಕಳೆದುಕೊಂಡ ನಂತರ ನನ್ನ ಮತ್ತು ನನ್ನ ಮಗನನ್ನು ಮುಸ್ಲಿರು ನಮ್ಮಿಬ್ಬರನ್ನು ಕರೆದುಕೊಂಡು ಹೋಗಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟು ನಮ್ಮನ್ನು ರಕ್ಷಣೆ ಮಾಡಿದರು ಎಂದು ಹೇಳಿದ್ದಾರೆ. ಇದು ನಮ್ಮ ಭಾರತದ ಸಂಕೇತ. ಇನ್ನೊಂದು ಕಡೆ ನಜರತ್ ಅಲಿ ಎಂಬ ವ್ಯಕ್ತಿ ನಾಲ್ಕು ಕುಟುಂಬಗಳನ್ನು ರಕ್ಷಣೆ ಮಾಡುತ್ತಾರೆ. ಅವರು ರಕ್ಷಣೆ ಮಾಡಿದ್ದರಿಂದ ನಾವು ಉಳಿದುಕೊಂಡಿವಿ ಎಂದು ಬರೆದುಕೊಂಡಿದ್ದು, ಎಡಪಂಥೀಯರಲ್ಲ, ರೈತ ಸಂಘದವರಲ್ಲ, ದಲಿತರಲ್ಲ, ಕಾಂಗ್ರೆಸ್‌ನವರಲ್ಲ, ಯಾರೂ ಅಲ್ಲ, ಛತ್ತಿಸಘಡದ ಯುವ ಮೋರ್ಚಾದ ಅರವಿಂದ್ ಆಗರವಾಲ್ ಎಂಬುವರು ಬರೆದುಕೊಂಡಿದ್ದಾರೆ. ನಜರತ್ ಆಲಿ ಇರದಿದ್ದರೆ ನಮ್ಮ ಕುಟುಂಬದ 11 ಜನರು ಉಳಿಯುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇದು ನಮ್ಮ ಭಾರತ, ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಅಷ್ಟೇ ಅಲ್ಲ, ಉಗ್ರಗ್ರಾಮಿಗಳಿಂದ, ಭಯೋತ್ಪಾದಕರಿಂದ ಜನರನ್ನು ರಕ್ಷಣೆ ಮಾಡಬೇಕೆಂದು ಕುದುರೆ ಮೇಲೆ ಕುಳಿತ್ತಿದ್ದ ಹಸೀಫ್ ಹುಸೇನ್ ಎಂಬಾತ ನಜರತ್ ಆಲಿ ಬಂಧು. ಆತ ಭಯೋತ್ಪಾದಕನಿಂದ ಎಕೆ-47 ಗನ್ ಕಿತ್ತುಕೊಳ್ಳಲು ಹೋಗಿ ತಾನು ಗುಂಡಿಗೆ ಬಲಿಯಾಗುತ್ತಾನೆ. ಅಂದರೆ ಪ್ರವಾಸಿಗರನ್ನು ರಕ್ಷಣೆ ಮಾಡಿ ಈ ಹತ್ಯಾಕಾಂಡ ಸರಿಯಲ್ಲ ಎಂದು ತಾನು ಎದೆಯೊಡ್ಡಿ ಗುಂಡಿಗೆ ಬಲಿಯಾಗುತ್ತಾನೆ, ಇದು ನಮ್ಮ ಭಾರತ ಎಂದು ಉಲ್ಲೇಖ ಮಾಡಿದರು.
ಇನ್ನೊಂದು ಬಹಳ ಮುಖ್ಯವಾದ ಸನ್ನಿವೇಶ ಏನೆಂದರೆ ಕೇರಳದ ಆರತಿ ಎಂಬ ಹೆಣ್ಣು ಮಗಳು ತನ್ನ ತಂದೆ ಕಳೆದುಕೊಂಡಾಗ ಆಕೆಯನ್ನು ರಕ್ಷಣೆ ಮಾಡಿದವರು ಮುಸಾಫಿರ್ ಮತ್ತು ಸಮೀರ್ ಎಂಬಿಬ್ಬರು ವ್ಯಕ್ತಿಗಳು. ಆಕೆ ಬರೆದುಕೊಳ್ಳುತ್ತಾಳೆ, ನನ್ನ ತಂದೆ ಕಳೆದುಕೊಂಡೆ, ಆದರೆ ಕಾಶ್ಮೀರದಲ್ಲಿ ಇಬ್ಬರು ಸಹೋದರರನ್ನು ಪಡೆದುಕೊಂಡೆ ಎಂದು ಹೇಳಿದ್ದಾರೆ. ಈ ಒಂದು ಸನ್ನಿವೇಶ ನೋಡಿದರೆ, ಅಮಾನವೀಯ ಘಟನೆ ನಡೆಸ ಸಂದರ್ಭದಲ್ಲಿ ಮಾನವೀಯತೆಯಿಂದ ವರ್ತಿಸುವ ಮನುಷ್ಯನ ಮನಸ್ಸುಗಳು ಇವೆ ಎಂಬುದನ್ನು ಯಾರು ಮರೆಯಬಾರದು. ಇದನ್ನು ಬದಲಿಸಬೇಕಾಗಿದೆ. ಅಲ್ಲಿ ಜಾತಿ ಬರಲಿಲ್ಲ, ಯಾವುದೇ ಧರ್ಮ ಬರಲಿಲ್ಲ, ಇವರ ಪ್ರಾಣವನ್ನು ರಕ್ಷಿಸುವ ಸಂದರ್ಭದಲ್ಲಿ ಜಾತಿ ಮತ್ತು ಧರ್ಮವನ್ನು ಮೀರಿದ ಮನಸ್ಸುಗಳು ಕೆಲಸ ಮಾಡಿದವಲ್ಲ, ಅಂತಹ ಭಾರತೀಯ ಮನಸ್ಸುಗಳನ್ನು ವಿಸ್ತಾರಿಸಬೇಕಾಗಿದೆ ಎಂದರು.

Previous articleಓಂಪ್ರಕಾಶ್ ಕೊಲೆ ಹಿಂದೆ ಪಿಎಫ್‌ಐ ಪಾತ್ರದ ಶಂಕೆ
Next articleಪಾಕಿಸ್ತಾನ ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಭಾರೀ ಅಗ್ನಿ ಅವಘಡ: ವಿಮಾನಗಳ ಹಾರಾಟ ರದ್ದು