ಗದಗ: “ಅಭಿವೃದ್ಧಿಯೇ ನಮ್ಮ ತಾಯಿ ತಂದೆ, ಗ್ಯಾರಂಟಿಯೇ ನಮ್ಮ ಬಂಧು ಬಳಗ ಎಂದು ನಾವು ನಂಬಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗದಗದ ರೋಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾನುವಾರ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು ಹೇಳಿದಿಷ್ಟು.
“ಜಿ.ಎಸ್ ಪಾಟೀಲ್ ಪಾಟೀಲ್ ಅವರು ಈ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳ ಮಾಹಿತಿಯ ಕಲ್ಲುಗಳನ್ನು ನೋಡುತ್ತಿದ್ದರೆ, ಅದರಲ್ಲೇ ಒಂದು ಮನೆ ಕಟ್ಟಿಕೊಳ್ಳಬಹುದು. ಆಮೂಲಕ ಅವರು ಈ ಕ್ಷೇತ್ರವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದರು.
ಅಧಿಕಾರ ನಶ್ವರ, ಕಾಂಗ್ರೆಸ್ ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ ಎಂಬಂತೆ ನಾವು ನಿಮ್ಮ ಸೇವೆ ಮಾಡುತ್ತಿದ್ದೇವೆ. ಕೇವಲ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗೆ ಮಾತ್ರ ನಾನು ಬಂದಿಲ್ಲ. ಸಜ್ಜನ, ಕ್ರಿಯಾಶೀಲವಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಧೀಮಂತ ನಾಯಕ ಜಿ.ಎಸ್ ಪಾಟೀಲ್ ಅವರನ್ನು ನಾಲ್ಕು ಬಾರಿ ವಿಧಾನಸಭೆಗೆ ಆರಿಸಿ ಕಳುಹಿಸಿದ ನಿಮಗೆ ನಾನು ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದರು.
ನಮ್ಮ ಸರ್ಕಾರದ ಅಧಿಕೃತ ಸಂಖ್ಯಾಬಲ 138, ಇನ್ನು ಇಬ್ಬರು ಪಕ್ಷೇತರರು ನಮಗೆ ಬೆಂಬಲವಾಗಿ ನಿಂತಿದ್ದಾರೆ. ಇವರ ಜತೆಗೆ ಬೇರೆಯವರೂ ನಮಗೆ ಬೆಂಬಲವಾಗಿ ನಿಂತಿದ್ದು, ಅವರ ಬಗ್ಗೆ ಇಲ್ಲಿ ಚರ್ಚೆ ಬೇಡ. 140ರಲ್ಲಿ ಜಿ.ಎಸ್ ಪಾಟೀಲ ಅವರೂ ಒಂದು ಭಾಗವಾಗಿದ್ದು, ಅವರ ನಾಯಕತ್ವ, ಹೆಚ್.ಕೆ. ಪಾಟೀಲ್ ಅವರ ಮುಖಂಡತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ಈ ಕಾರ್ಯಕ್ರಮಕ್ಕೆ ಬರುವ ಮುನ್ನ ನಾನು ಹಾಗೂ ಮುಖ್ಯಮಂತ್ರಿಗಳು ಬೀರಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ಮುಖ್ಯಮಂತ್ರಿಗಳು ಜನರಿಗೆ ನಿಮ್ಮಲ್ಲಿ ಯಾರಾದರೂ ಹಸಿವಿನಿಂದ ಇದ್ದೀರಾ ಎಂದು ಕೇಳಿದರು. ಅದಕ್ಕೆ ಅಲ್ಲಿದ್ದ ಜನರು ಇಲ್ಲ ಎಂದು ಹೇಳಿದರು. ಈ ದೇಶದಲ್ಲಿ ಯಾವುದೇ ಮುಖ್ಯಮಂತ್ರಿಗಳಿಗೂ ಜನರ ಬಳಿ ಈ ಪ್ರಶ್ನೆ ಕೇಳುವ ಧೈರ್ಯ ಇಲ್ಲ ಎಂದರು.
ಗಾಂಧೀಜಿ ಬೆಳಗಾವಿ ಅಧಿವೇಶನ ಶತಮಾನೋತ್ಸವಕ್ಕೆ ಆಹ್ವಾನ
ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನೂರು ವರ್ಷಗಳು ಪೂರೈಸಲಾಗಿದೆ. ಈಗ ಆ ಸ್ಥಾನದಲ್ಲಿ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಕೂತಿದ್ದಾರೆ. ಗಾಂಧೀಜಿ ಅವರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವು ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲು ಹೆಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಸಾರ್ವಜನಿಕ ಸಭೆಯನ್ನು ನಾವು ಆಯೋಜಿಸಿದ್ದೇವೆ. ಈ ವೇದಿಕೆಯಿಂದಲೇ ನಾನು ನಿಮ್ಮೆಲ್ಲರಿಗೂ ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ. ಈ ಐತಿಹಾಸಿಕ ಕ್ಷಣವನ್ನು ನೀವು ಕಣ್ತುಂಬಿಕೊಳ್ಳಬೇಕು. ಸುವರ್ಣಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೈಸೂರು ದಸರಾದಂತೆ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ.
ಗಾಂಧೀಜಿ ಅವರು ಈ ದೇಶದ ಆಸ್ತಿ. ಹೆಚ್.ಕೆ ಪಾಟೀಲ್ ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಗದಗ ಜಿಲ್ಲೆಯಲ್ಲಿ ಗ್ರಾಮೀಣ ವಿವಿಯಲ್ಲಿ ಗಾಂಧೀಜಿ ಅವರ ಸಬರಮತಿ ಆಶ್ರಮವನ್ನು ನಿರ್ಮಿಸಿದ್ದಾರೆ. ಆಮೂಲಕ ಜನಸಾಮಾನ್ಯರು ಅದನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಆಮೂಲಕ ಜನರಿಗೆ ಗಾಂಧಿ ತತ್ವ, ಗಾಂಧಿ ಆದರ್ಶ ಪಸರಿಸಲು ಈ ಯೋಜನೆ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.