ಅಭಿವೃದ್ದಿಯ ಹೆಸರಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಮೈಸೂರು: ಒಡೆಯರ್

ಮೈಸೂರು: ಸೂರು ಪರಂಪರೆ ಅಭಿವೃದ್ದಿಯ ಹೆಸರಿನಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಈಗಾಗಲೇ ಮೈಸೂರು ನಗರದ ಕಾಳಿಕಾಂಬಾ ದೇವಸ್ಥಾನದಿಂದ ಎಸ್.ಪಿ ಕಛೇರಿ ವೃತ್ತದ ವರೆಗೆ ರಸ್ತೆ ವಿಸ್ತರಣೆಗಾಗಿ 40ಕ್ಕೂ ಹೆಚ್ಚು ಮರಗಳನ್ನು ಹನನ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೆ ಲೋಕೋಪಯೋಗಿ ಇಲಾಖೆ ಇದೀಗ ಉತ್ತನಹಳ್ಳಿ ರಸ್ತೆ ದೇವಸ್ಥಾನ ಮಾರ್ಗವಾಗಿ 25 ಮರಗಳನ್ನು ಕಡಿಯುವಂತೆ ಅನುಮತಿ ನೀಡಲು ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಪರಿಸರದ ಒಡನಾಡಿಯಾಗಿ ಬೆಳೆದು ಬಂದಿರುವ ಮೈಸೂರು ಪರಂಪರೆ ಅಭಿವೃದ್ದಿಯ ಹೆಸರಿನಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿರುವುದು ಹಾಗೂ ಹಲವು ಜೀವಿಗಳಿಗೆ ಆಶ್ರಯವಾಗಿದ್ದ ಬೃಹತ್ ಮರಗಳ ಹನನವವಾಗಿರುವುದು ಅತ್ಯಂತ ವಿಷಾದನೀಯ.
ಮರಗಳನ್ನು ಕಡಿಯದೆ ರಸ್ತೆ ಅಗಲೀಕರಣಕ್ಕೆ ಪರ್ಯಾಯ ವ್ಯವಸ್ಥೆಯನ್ನು ಹುಡುಕುವಂತಹ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯ ನಿರ್ಧಾರ. ಈ ರೀತಿಯ ಪರಿಸರ ಸಂರಕ್ಷಣೆಗೆ ಧಕ್ಕೆಯಾಗುವಂತಹ ನಡೆಯಿಂದ ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗಬಹುದು. ಸಾರ್ವಜನಿಕರ ಸಮಾಲೋಚನೆಗೆ ತರದೆ ಏಕಾಏಕಿ ನಿರ್ದಾಕ್ಷಿಣ್ಯವಾಗಿ ಬೃಹತ್ ಮರಗಳನ್ನು ಕಡೆಯುವುದು ಸರಿಯಲ್ಲ. ಉತ್ತನಹಳ್ಳಿ ರಸ್ತೆ ಕಾಮಗಾರಿಯ ನೆಪದಲ್ಲಿ 25 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.