ಅಫ್ಘಾನ್ ಮೇಲೆ ಪಾಕ್ ಬಾಂಬ್ ದಾಳಿ ದಾಯಾದಿ ಕಲಹಕ್ಕೆ ಮೂಲವೆಲ್ಲಿ?

0
8

ಮಂಗಳವಾರ (ಡಿಸೆಂಬರ್ ೨೪) ರಾತ್ರಿ, ಪಾಕಿಸ್ತಾನದ ಯುದ್ಧ ವಿಮಾನಗಳು ಪೂರ್ವ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ನಾಲ್ಕು ಸ್ಥಳಗಳ ಮೇಲೆ ವಾಯುದಾಳಿ ನಡೆಸಿದವು. ಈ ದಾಳಿಯಲ್ಲಿ, ನಿಷೇಧಿತ ಭಯೋತ್ಪಾದಕ ಗುಂಪಾದ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್‌ಗೆ (ಟಿಟಿಪಿ) ಸಂಬಂಧಿಸಿದ ನೆಲೆಗಳನ್ನು ಗುರಿಯಾಗಿಸಲಾಗಿತ್ತು ಎನ್ನಲಾಗಿದೆ. ಭದ್ರತಾ ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಹಲವಾರು ಶಂಕಿತ ಉಗ್ರರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿವೆ. ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರವೂ ಪಾಕಿಸ್ತಾನಿ ಪಡೆಗಳು ವಾಯುದಾಳಿ ನಡೆಸಿದ್ದನ್ನು ಖಾತ್ರಿಪಡಿಸಿದೆ. ತಾಲಿಬಾನ್ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ ೪೬ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನಿ ಪಡೆಗಳು ಬೆರ್ನಾಲ್ ಜಿಲ್ಲೆಯ ಮುರ್ಗ ಮತ್ತು ಲಾಮನ್ ಪ್ರದೇಶಗಳಲ್ಲಿದ್ದ ಟಿಟಿಪಿ ನೆಲೆಗಳ ಮೇಲೆ ವಾಯುದಾಳಿ ನಡೆಸಿವೆ. ಇವುಗಳಲ್ಲಿ ಒಂದು ನೆಲೆಯನ್ನು ಟಿಟಿಪಿ ಮುಖ್ಯ ವ್ಯಕ್ತಿಗಳು ಬಳಸುತ್ತಿದ್ದರು ಎನ್ನಲಾಗಿದೆ.
ವಿಶೇಷ ಪ್ರತಿನಿಧಿ ರಾಯಭಾರಿ ಮುಹಮ್ಮದ್ ಸಾದಿಕ್ ನೇತೃತ್ವದ ಪಾಕಿಸ್ತಾನಿ ನಿಯೋಗ ಕಾಬೂಲ್‌ಗೆ ಭೇಟಿ ನೀಡಿರುವ ದಿನವೇ ಈ ವಾಯುದಾಳಿಗಳು ನಡೆದಿವೆ. ಪಾಕಿಸ್ತಾನದ ನಿಯೋಗ ಅಫ್ಘಾನಿಸ್ತಾನದ ಮಧ್ಯಂತರ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಮತ್ತು ವಿದೇಶಾಂಗ ಸಚಿವ ಅಮಿರ್ ಮುತ್ತಾಕಿ ಅವರನ್ನು ಭೇಟಿಯಾಗಿ, ಒಂದು ವರ್ಷದ ಸುದೀರ್ಘ ಅವಧಿಯ ಬಳಿಕ ರಾಜತಾಂತ್ರಿಕ ಮಾತುಕತೆಯನ್ನು ಪುನರಾರಂಭಿಸುವ ಕುರಿತು ಚರ್ಚೆ ನಡೆಸಿತ್ತು.
ಅಫ್ಘಾನ್ ತಾಲಿಬಾನಿನ ಸಹಯೋಗಿಯಾದ ಪಾಕಿಸ್ತಾನಿ ತಾಲಿಬಾನ್(ಟಿಟಿಪಿ) ಪಾಕಿಸ್ತಾನ ಸರ್ಕಾರದೊಡನೆ ಮಾಡಿಕೊಂಡಿದ್ದ ಕದನ ವಿರಾಮವನ್ನು ನವೆಂಬರ್ ೨೦೨೨ರಲ್ಲಿ ಅಂತ್ಯಗೊಳಿಸಿತು. ಆ ಬಳಿಕ, ಪಾಕಿಸ್ತಾನದಲ್ಲಿ ಹಿಂಸಾಚಾರಗಳು ವ್ಯಾಪಕವಾಗಿ ಹೆಚ್ಚಾದವು. ೨೦೨೩ ಒಂದು ವರ್ಷದಲ್ಲೇ ೭೦೦ಕ್ಕೂ ಹೆಚ್ಚು ದಾಳಿಗಳು ನಡೆದಿದ್ದು, ೧,೦೦೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.
ಅಫ್ಘಾನಿಸ್ತಾನದ ತಾಲಿಬಾನ್ ಟಿಟಿಪಿಗೆ ಆಶ್ರಯ ನೀಡುತ್ತಿದೆ ಎಂದು ಪಾಕ್ ಸರ್ಕಾರ ಆರೋಪಿಸಿದೆ. ಕಳೆದ ವರ್ಷಗಳಲ್ಲಿ, ಪಾಕಿಸ್ತಾನ ಟಿಟಿಪಿಯನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಅದಕ್ಕಾಗಿ ಟಿಟಿಪಿ ಜೊತೆ ಮಾತುಕತೆ, ಅಫ್ಘಾನಿಸ್ತಾನದ ಗಡಿಯಾದ್ಯಂತ ಬೇಲಿ, ಹಾಗೂ ಟಿಟಿಪಿಗೆ ಬೆಂಬಲ ನೀಡದಂತೆ ಅಫ್ಘಾನ್ ಸರ್ಕಾರಕ್ಕೆ ಆಗ್ರಹದಂತಹ ಕ್ರಮಗಳನ್ನು ಪಾಕಿಸ್ತಾನ ಕೈಗೊಂಡಿತ್ತು. ಅಫ್ಘಾನಿಸ್ತಾನದ ಗಡಿಯ ಬಳಿ ನಡೆಯುತ್ತಿರುವ ಹಿಂಸಾಚಾರಗಳ ಮೇಲೆ ಪಾಕಿಸ್ತಾನಕ್ಕೆ ಹೆಚ್ಚಿನ ನಿಯಂತ್ರಣ ಉಳಿದಿಲ್ಲ. ಪಾಕಿಸ್ತಾನ ಈಗ ತಾನೇ ಸೃಷ್ಟಿಸಿದ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದೆ. ಅಫ್ಘಾನಿಸ್ತಾನದ ಯುದ್ಧದಲ್ಲಿ ೨೦ ವರ್ಷಗಳ ಕಾಲ ಪಾಕಿಸ್ತಾನವೇ ಬೆಂಬಲಿಸಿದ್ದ ತಾಲಿಬಾನ್ ನಾಯಕರು ಈಗ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಯನ್ನು ರಕ್ಷಿಸುತ್ತಿದ್ದಾರೆ.
ಮಾಜಿ ಮಿತ್ರರ ನಡುವೆ ಕದನಕ್ಕೆ ಕಾರಣ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಹದಗೆಟ್ಟಿತ್ತು. ಆದರೆ, ಇದಕ್ಕೆ ಕಾರಣವಾದ ಗಡಿ ತಕರಾರು ಮತ್ತು ಗಡಿಯಾದ್ಯಂತ ಹಿಂಸಾಚಾರಗಳು ಸುದೀರ್ಘ ಕಾಲದಿಂದಲೂ ಇದ್ದವು. ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾದ ಸಮಯದಿಂದಲೂ, ಇಂದಿನ ತಾಲಿಬಾನ್ ಸರ್ಕಾರ ಸೇರಿದಂತೆ, ಅಫ್ಘಾನಿಸ್ತಾನದ ಯಾವುದೇ ಸರ್ಕಾರ ಅಧಿಕೃತ ಗಡಿಯನ್ನು ಒಪ್ಪಿಕೊಂಡಿರಲಿಲ್ಲ ಎಂದು ವಿಲ್ಸನ್ ಸೆಂಟರ್‌ನ ಸೌತ್ ಏಷ್ಯಾ ಇನ್ಸಿಟಟ್ಯೂಟ್‌ನ ಮೈಕೇಲ್ ಕುಗೆಲ್‌ಮ್ಯಾನ್ ಹೇಳಿದ್ದಾರೆ.
ಬ್ರಿಟಿಷ್ ಆಡಳಿತದ ಕಾಲದಲ್ಲಿ ಎಳೆದ ಗಡಿಯಾದ ಡ್ಯುರಾಂಡ್ ಲೈನ್ ೧,೬೪೦ ಮೈಲಿಗೂ (೨,೬೪೦ ಕಿಲೋಮೀಟರ್) ಹೆಚ್ಚು ಉದ್ದವಾಗಿದ್ದು, ಪಾಕಿಸ್ತಾನವನ್ನು ಅಧಿಕೃತವಾಗಿ ಅಫ್ಘಾನಿಸ್ತಾನದಿಂದ ಪ್ರತ್ಯೇಕಿಸುತ್ತದೆ. ಆದರೆ ಅಫ್ಘಾನಿಸ್ತಾನ ಯಾವತ್ತೂ ಈ ಗಡಿಯನ್ನು ಒಪ್ಪಿರಲಿಲ್ಲ. ಈಗಿನ ತಾಲಿಬಾನ್ ಸರ್ಕಾರವಂತೂ ಈ ಕುರಿತು ಇನ್ನಷ್ಟು ಕಠಿಣ ನಿಲುವು ತಳೆದಿದೆ. ಈ ಕಾರಣದಿಂದಾಗಿ ಗಡಿಯಲ್ಲಿ ಕಾವಲು ಕಾಯುವ ತಾಲಿಬಾನ್ ಯೋಧರು ಮತ್ತು ಪಾಕಿಸ್ತಾನಿ ಯೋಧರ ನಡುವೆ ಆಗಾಗ ಚಕಮಕಿಗಳು ನಡೆದಿವೆ.
ಡ್ಯುರಾಂಡ್ ಗಡಿ ಬಹುತೇಕ ಪಶ್ತೂನ್ ಜನರನ್ನು ಹೊಂದಿರುವ ಬುಡಕಟ್ಟು ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಪಾಕಿಸ್ತಾನ ತಾನು ಎರಡು ದೇಶಗಳನ್ನು ಪ್ರತ್ಯೇಕಿಸುವ ಗಡಿಯಾದ್ಯಂತ ತಂತಿ ಬೇಲಿ ಹಾಕುವುದಾಗಿ ಹೇಳಿದ್ದರೆ, ಈ ಬೇಲಿ ಕುಟುಂಬಗಳನ್ನು ಪ್ರತ್ಯೇಕಿಸುತ್ತದೆ ಎಂದು ತಾಲಿಬಾನ್ ಹೇಳಿದೆ.
ಈಗ ಅಫ್ಘಾನಿಸ್ತಾನದಲ್ಲಿ ಯುದ್ಧ ಮುಕ್ತಾಯಗೊಂಡಿದ್ದು, ಸುರಕ್ಷಿತ ನೆಲೆಗಾಗಿ ಮತ್ತು ಯುದ್ಧ ಕಾಲದ ಸಹಾಯಕ್ಕಾಗಿ ತಾಲಿಬಾನಿಗೆ ಪಾಕಿಸ್ತಾನದ ಅವಶ್ಯಕತೆ ಇಲ್ಲ. ಅದರ ಬದಲಿಗೆ, ತಾಲಿಬಾನ್ ಅಫ್ಘಾನಿಸ್ತಾನದ ಒಳಗೆ ಹೆಚ್ಚಿನ ಜನಬೆಂಬಲ ಗಳಿಸಲು ಪ್ರಯತ್ನ ನಡೆಸುತ್ತಿದೆ. ಅಫ್ಘಾನ್ ನಾಗರಿಕರು ಹೆಚ್ಚಾಗಿ ಪಾಕಿಸ್ತಾನಿ ಸರ್ಕಾರದ ಕುರಿತು ಅನುಮಾನ ಹೊಂದಿದ್ದರು. ಕುಗೆಲ್‌ಮ್ಯಾನ್ ಪ್ರಕಾರ, ಪಾಕಿಸ್ತಾನವನ್ನು ಟೀಕಿಸುವ ಮೂಲಕ ಅಫ್ಘಾನ್ ಜನರ ವಿಶ್ವಾಸವನ್ನು ಒಂದಷ್ಟು ಗಳಿಸಲು ಸಾಧ್ಯವಾಗಬಹುದು ಎಂದು ತಾಲಿಬಾನ್ ಭಾವಿಸಿದೆ.
ಚೀನಾದ ಒತ್ತಡವೇ ಕಾರ್ಯಾಚರಣೆಗೆ ಕಾರಣವಾಯಿತೇ?
ಚೀನಾದಿಂದ ಹೆಚ್ಚಿನ ಒತ್ತಡವಿದ್ದ ಕಾರಣ ಅಫ್ಘಾನಿಸ್ತಾನದ ಮೇಲೆ ವಾಯುದಾಳಿ ನಡೆಸಲಾಯಿತು ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಚೀನಾದ `ಬೆಲ್ಟ್ ಆ್ಯಂಡ್ ರೋಡ್’ ಉಪಕ್ರಮದಡಿ, ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್(ಸಿಪಿಇಸಿ) ಯೋಜನೆಗಳಲ್ಲಿ ಬಹಳಷ್ಟು ಚೀನೀ ಕಾರ್ಮಿಕರು ಭಾಗಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಓರ್ವ ಆತ್ಮಹತ್ಯಾ ದಾಳಿಕೋರ ಚೀನೀ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ, ಐವರು ಚೀನೀ ಇಂಜಿನಿಯರ್‌ಗಳ ಸಾವಿಗೆ ಕಾರಣನಾದ. ಆತನನ್ನು ಅಫ್ಘಾನ್ ನಾಗರಿಕ ಎಂದು ಪಾಕಿಸ್ತಾನ ಆರೋಪಿಸಿತ್ತು.
ಚೀನಾ ಈಗ ನಿರ್ಬಂಧಗಳ ಸುಳಿಗೆ ಸಿಲುಕಿ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ಹೂಡಿಕೆ ನಡೆಸುವ ಸಾಮರ್ಥ್ಯ ಹೊಂದಿರುವುದರಿಂದ, ಅದು ತಾಲಿಬಾನ್ ಮೇಲೂ ಒಂದಷ್ಟು ಪ್ರಭಾವ ಹೊಂದಿದೆ. ಒಂದು ವೇಳೆ ಚೀನಾ ಏನಾದರೂ ಅಫ್ಘಾನಿಸ್ತಾನದ ಒಳಗೆ ಮತ್ತು ಪಾಕಿಸ್ತಾನದ ಗಡಿಯಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ಕಡಿಮೆಗೊಳಿಸುವಂತೆ ತಾಲಿಬಾನ್ ಮನ ಒಲಿಸಲು ಯಶಸ್ವಿಯಾದರೆ, ಅದು ಚೀನಾ ಪಾಕಿಸ್ತಾನ ಎರಡಕ್ಕೂ ಪ್ರಯೋಜನಕಾರಿಯಾಗಬಹುದು.
ಕಾರ್ಯತಂತ್ರದ ಅನುಕೂಲತೆ
ಟಿಟಿಪಿಯ ಪ್ರಮುಖ ಬೇಡಿಕೆ ಎಂದರೆ, ಖೈಬರ್ ಪಖ್ತೂನ್‌ಖ್ವಾ ಪ್ರದೇಶದ ಜೊತೆಗಿನ ಫಾತಾದ ವಿಲೀನವನ್ನು ಹಿಂಪಡೆಯುವುದು. ಈ ಬೇಡಿಕೆ ಟಿಟಿಪಿಯ ಪ್ರಮುಖ ಗುರಿಯಾಗಿದ್ದು, ಇದನ್ನು ಹಲವು ಕಾರಣಗಳಿಗಾಗಿ ಟಿಟಿಪಿ ಆಗ್ರಹಿಸುತ್ತಲೇ ಇದೆ. ಟಿಟಿಪಿ ಫಾತಾ ಪ್ರಾಂತ್ಯವನ್ನು ತನ್ನ ಕಾರ್ಯಾಚರಣೆಗಳಿಗೆ, ನೂತನ ಸದಸ್ಯರ ನೇಮಕಾತಿಗೆ ಬಳಸುತ್ತದೆ. ಬಹಳಷ್ಟು ಸ್ಥಳೀಯ ಮತ್ತು ವಲಸಿಗ ಪಶ್ತೂನ್‌ಗಳು ಇಲ್ಲಿಯೇ ವಾಸಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಟಿಟಿಪಿ ತನ್ನ ವಿಶಿಷ್ಟ ರಾಜಕೀಯ ಸಮಸ್ಯೆಗಳು ಮತ್ತು ಅಸಮಾಧಾನಗಳನ್ನು ಹೆಚ್ಚಿನ ಬೆಂಬಲ ಗಳಿಸಲು ಬಳಸುತ್ತಿದೆ. ಎರಡನೆಯದಾಗಿ, ಫಾತಾ ಪ್ರದೇಶ ಅಫ್ಘಾನಿಸ್ತಾನದ ಗಡಿಯ ಬಳಿ ಇರುವುದರಿಂದ, ಟಿಟಿಪಿಗೆ ಕಾರ್ಯತಂತ್ರದ ಅನುಕೂಲತೆಗಳನ್ನು ಕಲ್ಪಿಸುತ್ತದೆ. ಟಿಟಿಪಿ ಹಕ್ಕಾನಿ ನೆಟ್‌ವರ್ಕ್ ನಂತಹ ಗುಂಪುಗಳೊಡನೆಯೂ ಕಾರ್ಯಾಚರಿಸಿ, ತನ್ನ ಜನಾಂಗೀಯ ಮತ್ತು ಮಿಲಿಟರಿ ಸಂಬಂಧಗಳ ಪ್ರಯೋಜನ ಪಡೆದುಕೊಳ್ಳುತ್ತಿದೆ.

ಸ್ಥಿರತೆಗಾಗಿ ಪಾಕ್ ನಿರಂತರ ಸಮರ
ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಸುನ್ನಿ ಇಸ್ಲಾಮಿಕ್ ಗುಂಪುಗಳನ್ನು ಒಗ್ಗೂಡಿಸುವ ಸಲುವಾಗಿ ೨೦೦೭ರಲ್ಲಿ ಟಿಟಿಪಿಯನ್ನು ಸ್ಥಾಪಿಸಲಾಯಿತು. ಪಾಕಿಸ್ತಾನಿ ಸೇನೆ ಫೆಡರಲಿ ಅಡ್ಮಿನಿಸ್ಟರ್ಡ್ ಟ್ರೈಬಲ್ ಏರಿಯಾಸ್ (ಎಫ್‌ಎಟಿಎ) ಪ್ರದೇಶದಲ್ಲಿ ಅಲ್ ಖೈದಾ ಜೊತೆ ಸಂಬಂಧ ಹೊಂದಿರುವ ಭಯೋತ್ಪಾದಕರ ಮೇಲೆ ದಾಳಿ ನಡೆಸಿದ ಬಳಿಕ ಟಿಟಿಪಿ ಸ್ಥಾಪನೆಗೊಂಡಿತು.
೨೦೧೮ರಲ್ಲಿ ಖೈಬರ್ ಪಖ್ತೂನ್‌ಖ್ವಾ ಜೊತೆ ವಿಲೀನಗೊಳ್ಳುವ ಮುನ್ನ, ಫಾಟಾ ಪ್ರದೇಶ ಅಫ್ಘಾನಿಸ್ತಾನದ ಜೊತೆಗಿನ ಪಾಕಿಸ್ತಾನದ ಗಡಿಯಾದ್ಯಂತ ೨೭,೨೨೦ ಕಿಲೋಮೀಟರ್ ವ್ಯಾಪಿಸಿತ್ತು. ಈ ಪ್ರದೇಶ ಅಂದಾಜು ೫೦ ಲಕ್ಷ ಜನರಿಗೆ ನೆಲೆಯಾಗಿದ್ದು, ಅವರಲ್ಲಿ ಬಹುತೇಕರು ಪಶ್ತೂನ್ ಸಮುದಾಯಕ್ಕೆ ಸೇರಿದ್ದರು. ಈ ಸುದೀರ್ಘ ಪ್ರದೇಶ ಕೆಲವೆಡೆ ಹೆಚ್ಚು ಅಗಲ, ಕೆಲವೆಡೆ ಕಡಿಮೆ ಅಗಲವಿದ್ದು, ಏಳು ಬುಡಕಟ್ಟು ಪ್ರದೇಶಗಳು ಮತ್ತು ಆರು ಮುಂಚೂಣಿ ಪ್ರಾಂತ್ಯಗಳನ್ನು ಒಳಗೊಂಡಿತ್ತು. ಈ ಪ್ರದೇಶ ಒಂದು ಪ್ರತ್ಯೇಕ ಆಡಳಿತ ವ್ಯವಸ್ಥೆಯಡಿ, ಬ್ರಿಟಿಷ್ ಕಾಲದ ಫ್ರಾಂಟಿಯರ್ ಕ್ರೈಮ್ಸ್ ರೆಗ್ಯುಲೇಶನ್ (ಎಫ್‌ಸಿಆರ್) ಎಂಬ ಕಾನೂನನ್ನು ಹೊಂದಿ ಕಾರ್ಯ ನಿರ್ವಹಿಸುತ್ತಿತ್ತು. ಈ ಕಾನೂನು ಬುಡಕಟ್ಟು ಹಿರಿಯರಿಗೆ ಹೆಚ್ಚಿನ ಅಧಿಕಾರ ನೀಡಿ, ಪಾಕಿಸ್ತಾನದ ಕೇಂದ್ರ ಸರ್ಕಾರದ ಪಾತ್ರವನ್ನು ಮಿತಿಗೊಳಿಸಿತ್ತು.
ಫಾತಾ ತನ್ನ ಒರಟಾದ ಭೂಪ್ರದೇಶ, ಬುಡಕಟ್ಟು ಸಂಪ್ರದಾಯಗಳು ಮತ್ತು ಕಾರ್ಯತಂತ್ರದ ತಾಣಗಳಿಗೆ ಹೆಸರಾಗಿದ್ದು, ಅದರ ದುರ್ಗಮ ಭೌಗೋಳಿಕ ಪರಿಸರದಿಂದಾಗಿ ಮತ್ತು ಬುಡಕಟ್ಟು ಸಮುದಾಯಗಳ ಸ್ವಾತಂತ್ರ‍್ಯದಿಂದಾಗಿ ಅದರ ಆಡಳಿತ ನಡೆಸುವುದು ಸವಾಲಾಗಿದೆ. ೨೦೦೧ರಲ್ಲಿ ಅಫ್ಘಾನಿಸ್ತಾನದ ಮೇಲೆ ಅಮೆರಿಕಾ ಆಕ್ರಮಣದ ಪರಿಣಾಮವಾಗಿ, ಈ ಪ್ರದೇಶ ತಾಲಿಬಾನ್ ಮತ್ತು ಅಲ್ ಖೈದಾದಂತಹ ಭಯೋತ್ಪಾದಕ ಸಂಘಟನೆಗಳಿಗೆ ಮುಖ್ಯ ನೆಲೆಯಾಯಿತು. ೨೦೧೮ರಲ್ಲಿ, ಈ ಪ್ರದೇಶವನ್ನು ದೇಶದ ಕಾನೂನು ಮತ್ತು ಆಡಳಿತ ವ್ಯವಸ್ಥೆಯಡಿ ತರುವ ಸಲುವಾಗಿ, ಫಾತಾವನ್ನು ಖೈಬರ್ ಪಖ್ತೂನ್‌ಖ್ವಾ (ಕೆಪಿ) ಜೊತೆಗೆ ವಿಲೀನಗೊಳಿಸಲಾಯಿತು.
ಟಿಟಿಪಿ ಪಾಕ್-ಅಫ್ಘಾನ್ ಗಡಿಯಾದ್ಯಂತ ತನ್ನ ನೆಲೆಯನ್ನು ಹೊಂದಿದೆ. ಟಿಟಿಪಿ ೩೦,೦೦೦-೩೫,೦೦೦ ಸಕ್ರಿಯ ಯೋಧರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಟಿಟಿಪಿ ಪಶ್ತೂನ್ ಜನಸಂಖ್ಯೆ ಹೆಚ್ಚಿರುವ ಪ್ರದೇಶದಿಂದ ಕಾರ್ಯಾಚರಿಸುತ್ತದಾದರೂ, ಅದು ಒಟ್ಟಾರೆಯಾಗಿ ಪಶ್ತೂನಿಗರ ಪ್ರತಿನಿಧಿಯಲ್ಲ. ವಾಸ್ತವವಾಗಿ, ಪಶ್ತೂನ್‌ಗಳು ಟಿಟಿಪಿಯನ್ನು ವಿರೋಧಿಸುತ್ತಿದ್ದು, ಅದರ ಹಿಂಸಾಚಾರದ ಬಲಿಪಶುಗಳಾಗಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಟಿಟಿಪಿ ಪಾಕಿಸ್ತಾನದ ಸರ್ಕಾರವನ್ನು ಕಿತ್ತೊಗೆದು, ಅದರ ಜಾಗದಲ್ಲಿ ಎಮಿರೇಟ್ ಅನ್ನು (ಧಾರ್ಮಿಕ ನಾಯಕ ಅಥವಾ ಆಡಳಿತಗಾರನ ನೇತೃತ್ವದ ಸರ್ಕಾರ) ಜಾರಿಗೆ ತಂದು, ಪಾಕಿಸ್ತಾನದಲ್ಲಿ ಕಟ್ಟುನಿಟ್ಟಿನ ಇಸ್ಲಾಮಿಕ್ ನಿಯಮಗಳನ್ನು ಹೇರುವ ಗುರಿ ಹೊಂದಿದೆ. ಟಿಟಿಪಿ ಪಾಕಿಸ್ತಾನ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಿ, ರಾಜಕಾರಣಿಗಳ ಹತ್ಯೆ ನಡೆಸಿ, ಪಾಕಿಸ್ತಾನವನ್ನು ದುರ್ಬಲಗೊಳಿಸಲು ಪ್ರಯತ್ನ ನಡೆಸಿದೆ.
೨೦೨೧ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ್ದು ಟಿಟಿಪಿಗೂ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿತು. ನವೆಂಬರ್ ೨೦೨೨ರಲ್ಲಿ, ಟಿಟಿಪಿ ಪಾಕಿಸ್ತಾನ ಸರ್ಕಾರದ ಜೊತೆಗಿನ ಕದನ ವಿರಾಮವನ್ನು ಕೊನೆಗೊಳಿಸಿದ ಬಳಿಕ, ಪಾಕಿಸ್ತಾನಿ ಯೋಧರು ಮತ್ತು ಪೊಲೀಸರ ಮೇಲಿನ ದಾಳಿಗಳು ಹೆಚ್ಚತೊಡಗಿದವು. ಕಾಬೂಲ್‌ನಲ್ಲಿ ಅಫ್ಘಾನಿಸ್ತಾನ ಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಬಳಿಕ ಮಾತುಕತೆ ವಿಫಲವಾಯಿತು. ಇತ್ತೀಚಿನ ತಿಂಗಳುಗಳಲ್ಲಿ, ಟಿಟಿಪಿ ಪಾಕಿಸ್ತಾನದಲ್ಲಿ ಹಲವಾರು ದಾಳಿ ನಡೆಸಿ, ಬಹಳಷ್ಟು ಯೋಧರ ಸಾವುನೋವಿಗೆ ಕಾರಣವಾಗಿದೆ.

Previous articleಬಾಗಿಲು ಒದ್ದು ಅಧಿಕಾರ ಪಡೆಯುವುದು ಹೇಗೆ?
Next articleಕಾಣುವ ಕನಸಿಗೂ ಕಾನೂನು ಚೌಕಟ್ಟು!