ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ

ದಾವಣಗೆರೆ: ಅಪ್ರಾಪ್ತೆ ಮೇಲೆ ಬಲವಂತಾಗಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-೧ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಂತ ಆಲಿಯಾಸ್ ಹನುಮೇಶ(೨೦) ಶಿಕ್ಷೆಗೊಳಗಾದ ಆರೋಪಿ. ೨೦೨೩ರ ಫೆಬ್ರವರಿ ೧೧ರಂದು ೧೩ ವರ್ಷದ ಮಗಳು ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮನೆಗೆ ಬಂದಿರಲಿಲ್ಲ ಎಂದು ಆಕೆಯ ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಮಾತನಾಡಿಸುವ ನೆಪದಲ್ಲಿ ಮದುವೆ ಆಗುವುದಾಗಿ ಪುಸಲಾಯಿಸಿ ಒತ್ತಾಯ ಪೂರ್ವಕವಾಗಿ ಅದೇ ದಿನ ಸಂಜೆ ಬಸ್ಸಿನಲ್ಲಿ ಬೆಂಗಳೂರಿನ ಬಿಇಎಲ್ ಲೇಔಟ್‌ನ ಭರತ್ ನಗರ ೮ನೇ ಕ್ರಾಸಿನಲ್ಲಿರುವ ತಾತ್ಕಾಲಿಕ ಶೆಡ್‌ನಲ್ಲಿ ಆರೋಪಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದ್ದರೂ ಅವರ ಇಚ್ಛೆಗೆ ವಿರುದ್ಧವಾಗಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಮಲ್ಲಮ್ಮ ಚೌಬೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪಿ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ೨೦ವರ್ಷ ಕಾರಾಗೃಹ ಶಿಕ್ಷೆ, 35 ಸಾವಿರ ದಂಡ ಹಾಗೂ ಸಂತ್ರಸ್ತೆಗೆ 35 ಸಾವಿರ ಮತ್ತು ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಪಿರ್ಯಾದಿ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು.