ನಮಗೆ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಇದಕ್ಕಾಗಿ 536.71 ಕೋಟಿ ಹಣ ಖರ್ಚಾಗಲಿದೆ
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಮಹತ್ವದ ಬದಲಾವಣೆ ಮಾಡಿರುವುದಾಗಿ ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಷ್ಟು ದಿನ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪದೇ ಇರೋದ್ರೀಂದ 5 ಕೆಜಿ ಅಕ್ಕಿ ಮತ್ತು 5 ಕೆಜಿಗೆ ಹಣ ಕೊಡ್ತಿದ್ವಿ. ಈಗ ಕೇಂದ್ರ ಸರ್ಕಾರ 22.50 ರೂಪಾಯಿ ಕಡಿಮೆ ಬೆಲೆಯಲ್ಲಿ ಅಕ್ಕಿ ಕೊಡಲು ಒಪ್ಪಿದೆ. ಹೀಗಾಗಿ ಇನ್ನು ಮುಂದೆ 10 ಕೆಜಿ ಅಕ್ಕಿ ಕೊಡೋದಾಗಿ ಸ್ಪಷ್ಟಪಡಿಸಿದರು. ಈ ತಿಂಗಳಿಂದಲೇ 10 ಕೆಜಿ ಅಕ್ಕಿ ಹಂಚಿಕೆ ಮಾಡಲಾಗುವುದು ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲು ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ್ದು, ನಂತರದ ದಿನಗಳಲ್ಲಿ ಅಕ್ಕಿಯ ಲಭ್ಯವಾಗದ ಕಾರಣ ನಮ್ಮ ಸರ್ಕಾರ ಸಾರ್ವಜನಿಕರಿಗೆ ಕೊಟ್ಟ ಮಾತಿನಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ರೂ. 170/- ರೂಗಳಂತೆ ನೇರ ನಗದು ವರ್ಗಾವಣೆ ಮಾಡುತ್ತಿತ್ತು, ಈಗಾಗಲೇ ಅಕ್ಟೋಬರ್‌ವರೆಗೆ ಹಣ ಪಾವತಿ ಮಾಡಿದ್ದು ನವೆಂಬರ್, ಡಿಸೆಂಬರ್, ಜನವರಿ ಹಣ ಸಕಾಲಕ್ಕೆ ಫಲಾನುಭವಿಗಳಿಗೆ ಸೇರಲಿದೆ. ಅಲ್ಲದೇ ಈಗಾಗಲೇ ಫೆಬ್ರವರಿ ತಿಂಗಳ ಪಡಿತರ ಪಡೆದಿದ್ದರೆ ಹೆಚ್ಚುವರಿ ಅಕ್ಕಿಯನ್ನ ಮಾರ್ಚ್ ತಿಂಗಳು ಕೊಡಲಿದ್ದೇವೆ, ನಮಗೆ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಇದಕ್ಕಾಗಿ 536.71 ಕೋಟಿ ಹಣ ಖರ್ಚಾಗಲಿದೆ. ಈ ಹಣ ನಾವು ಕೇಂದ್ರಕ್ಕೆ ಕೊಡಲು ಒಪ್ಪಿದ್ದೇವೆ. ರಾಜ್ಯದಲ್ಲಿ ಸುಮಾರು 1.53 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ ಇದ್ದು, 4.50 ಕೋಟಿ ಜನರಿಗೆ ಅಕ್ಕಿ ಕೊಡ್ತಿದ್ದೇವೆ. ಸಾಗಣೆ ವೆಚ್ಚವೂ ಸೇರಿ 25 ರೂ.ಗೆ ನಮಗೆ ಅಕ್ಕಿ ಸಿಗಲಿದೆ. ಹಣದ ಬದಲಾಗಿ ಅಕ್ಕಿ ಕೊಡೋದ್ರೀಂದ ಸರ್ಕಾರಕ್ಕೆ ಪ್ರತಿ ತಿಂಗಳು 150 ರಿಂದ 190 ಕೋಟಿ ರೂ. ಉಳಿತಾಯವಾಗಲಿದೆ ಎಂದರು.