ವಿತ್ತೀಯ ಶಿಸ್ತಿನ ಬಗ್ಗೆ ಮಾತನಾಡುವ ಮುಖ್ಯ ಮಂತ್ರಿಗಳು ಈ ಅನುದಾನ ತಾರತಮ್ಯದ ಬಗ್ಗೆ ಮೌನ
ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಬಿಡಿಗಾಸು ಕೂಡ ಬಿಡುಗಡೆ ಆಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸರ್ಕಾರ ಸಂಪನ್ಮೂಲಗಳನ್ನೆಲ್ಲ ಗ್ಯಾರಂಟಿ ಯೋಜನೆಗಳಿಗೆ ಬಳಸಿ ಈಗ ನಿಗಮಗಳಿಗೆ ಹಣ ಕೊಡಲಾಗದೆ ಕೈಚೆಲ್ಲಿದೆ. ಆರ್ಥಿಕ ವರ್ಷದ ಒಂಬತ್ತು ತಿಂಗಳು ಕಳೆದರೂ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ, ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಬಿಲ್ಲವ/ಈಡಿಗ ಸಮುದಾಯದ ಅಭಿವೃದ್ಧಿಗೆ ರಚಿಸಿರುವ ವಿಶೇಷ ಕೋಶ, ವಿಶ್ವ ಕರ್ಮ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಬಿಡಿಗಾಸು ಕೂಡ ಬಿಡುಗಡೆ ಆಗಿಲ್ಲ.
ಸಮುದಾಯದ ಅಭಿವೃದ್ಧಿಗೆ ರಚಿಸಿರುವ ಈ ನಿಗಮಗಳು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು, ಸಮುದಾಯ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ವಿತ್ತೀಯ ಶಿಸ್ತಿನ ಬಗ್ಗೆ ಮಾತನಾಡುವ ಮುಖ್ಯ ಮಂತ್ರಿಗಳು ಈ ಅನುದಾನ ತಾರತಮ್ಯದ ಬಗ್ಗೆ ಮೌನ ವಹಿಸಿರುವುದು ನಿಜಕ್ಕೂ ಖಂಡನೀಯ ಎಂದಿದ್ದಾರೆ.