ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಅವಕಾಶ ಇಲ್ಲ

0
48

ನಗರ ಹಾಗೂ ಪಟ್ಟಣ ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ

ಬೆಂಗಳೂರು: ಅನಧಿಕೃತ ಬಡಾವಣೆಗಳು ನಗರ ಹಾಗೂ ಪಟ್ಟಣ ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇವೆ. ಇವೆಲ್ಲಕ್ಕೂ ನಾವು ಅಂತ್ಯ ಹಾಡುತ್ತಿದ್ದೇವೆ. ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಅವಕಾಶ ಇಲ್ಲ. ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದ ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿ ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಪರಿಣಾಮ‌ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಇವೆಲ್ಲಾ ಅನಾನುಕೂಲಗಳಿಗೂ ಅಂತ್ಯ ಹಾಡಬೇಕಿದೆ.

ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಾಗಿವೆ.‌ ಒಂದು ಬಾರಿ, ಇದೊಂದು ಬಾರಿ ‘ಬಿ ಖಾತಾ’ ಕೊಟ್ಟು ಅಂತ್ಯ ಹಾಡುತ್ತೇವೆ. 3 ತಿಂಗಳುಗಳ ಒಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಬೇಕು.

ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯಾಧಿಕಾರಿ, ನಗರ ಯೋಜನಾ ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆ. ಸಂಬಂಧಿಸಿದ ಅಧಿಕಾರಿಯ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ.

ಮಧ್ಯವರ್ತಿಗಳಿಗೆ, ಬ್ರೋಕರ್ ಗಳಿಗೆ ತಕ್ಷಣ ಗೇಟ್ ಪಾಸ್ ಕೊಟ್ಟು ಕಳಿಸಿ. ಕಾಯ್ದೆಯ ದೂರದೃಷ್ಟಿಯನ್ನು ಅಧಿಕಾರಿಗಳು ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು.

ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒಂದು ಬಾರಿ ಪರಿಹಾರ ಕೊಟ್ಟಿದ್ದೇವೆ. ಮತ್ತೆ ಎಲ್ಲೂ ಅನಧಿಕೃತ ಬಡಾವಣೆಗಳು ತಲೆಎತ್ತಬಾರದು ಎಂದಿದ್ದಾರೆ.

Previous articleನಗರ ಸಂಘ ಸಂಚಾಲಕ ಡಾ.ಗೋವಿಂದ ನರೇಗಲ್ ನಿಧನ
Next articleಕಂಟ್ರಿ ಪಿಸ್ತೂಲ್ ಪೊಲೀಸರ ವಶ