ಗ್ರಾಮಸ್ಥರಿಂದ ಅಧಿಕಾರಿಗಳ ಮೇಲೆ ದಾಳಿಗೆ ಯತ್ನ: ಇಬ್ಬರು ಪೊಲೀಸ್‌ ವಶಕ್ಕೆ

ಕವಿತಾಳ(ರಾಯಚೂರು): ಉದ್ಯೋಗ ಕಾಮಗಾರಿ ನಡೆದ ಸ್ಥಳಕ್ಕೆ ಪರಿಶೀಲನೆಗೆ ಬಂದ ಕೇಂದ್ರ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲವೆಂದು ಆಕ್ರೋಶ ಹೊರಹಾಕಿ ವಾಗ್ವಾದ ನಡೆಸಿ ಅಧಿಕಾರಿಗಳ ಮೇಲೆ ದಾಳಿಗೂ ಯತ್ನಿಸಿರುವ ಘಟನೆ ಶುಕ್ರವಾರ ಮಸ್ಕಿ ತಾಲೂಕಿನ ಬೆಂಚಮರಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸ್ಪಂದಿಸಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ, ಮಸ್ಕಿ ತಾಪಂ ಇಒ ಅಮರೇಶ ಯಾದವ್, ಪಿಡಿಒ ಕೃಷ್ಣ ಹುನಗುಂದ, ಕೇಂದ್ರದ ತಂಡದ ಅಧಿಕಾರಿ ಪಿ.ಶಿವಶಂಕರ ಅವರ ಮೇಲೂ ದಾಳಿ ನಡೆಸಲು ಯತ್ನಿಸಿದ್ದಾರೆ. ತಳ್ಳಾಟ, ನೂಕಾಟವೂ ನಡೆದಿದೆ. ಗ್ರಾಮದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಸೇರಿದಂತೆ 8 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪಿಡಿಒ ಹೇಳಿಕೆ: ಬೆಂಚಮರಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಪಂಚಾಯತಿಯಿಂದ ಖಾಸಗಿ ಬೋರ್‌ಗಳನ್ನು ತೆಗೆದುಕೊಂಡು ಪೂರೈಕೆ ಮಾಡಲಾಗುತ್ತಿಲ್ಲ. ಅಲ್ಲದೇ ಎರಡು ಬೋರ್‌ವೆಲ್ ಕೊರೆಸಿದರೂ ನೀರು ಒಣಗಿ ಹೋಗಿವೆ. ಈ ಬಗ್ಗೆ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಹುನಗುಂದ ಅವರು ತಿಳಿಸಿದ್ದಾರೆ.