ಗದಗ(ನರೇಗಲ್ಲ): ಸಮೀಪದ ಕೋಡಿಕೊಪ್ಪದ ಶ್ರೀ ಹಠಯೋಗಿ ವೀರಪ್ಪಜ್ಜನ ಪುಣ್ಯಾರಾಧನೆ ಶತಮಾನೋತ್ಸವ ಹಾಗೂ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ೬ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಕಂಕೈರ್ಯಗಳು ಜರುಗಿದವು. ಸಂಜೆ ೫.೩೦ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವವು ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು. ತೇರಿನ ಹಗ್ಗವು ಸಿದ್ನೇಕೊಪ್ಪದಿಂದ ಭಜನೆ, ಡೂಳ್ಳು, ಕಹಳೆ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿತು. ರಥದ ಕಳಸವು ಸಂಕನಗೌಡ್ರ ಮನೆಯಿಂದ ಮೆರವಣಿಗೆ ಮೂಲಕ ವೀರಪ್ಪಜ್ಜನ ಮಠವನ್ನು ತಲುಪಿತು. ನೆರೆದ ಭಕ್ತರ ಸಮೂಹ ಹಠಯೋಗಿ ವೀರಪ್ಪಜ್ಜನಿಗೆ ಜಯವಾಗಲಿ, ಹರಹರ ಮಹಾದೇವ ಎಂಬ ಜಯಘೋಷಣೆಗಳು ಮುಗಿಲು ಮುಟ್ಟುವಂತಿತ್ತು. ಸಕಲ ವಾದ್ಯ ಮೇಳದೊಂದಿಗೆ ತೇರು ಬೇವಿನ ಗಿಡದ ಪಾದಗಟ್ಟಿವರೆಗೆ ತಲುಪಿ ಮರಳಿ ಮೂಲ ಸ್ಥಳಕ್ಕೆ ಬಂದು ತಲುಪಿತು. ಜಾತ್ರೆಯಲ್ಲಿ ವಿವಿಧ ಭಾಗಗಳಿಂದ ಅಂದಾಜು ೨೫ ಸಾವಿರಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.