ಅವರು ಅದೃಷ್ಟದುಂಗುರ ಕೊಡುತ್ತಾರೆ… ಆ ಉಂಗುರ ಧರಿಸಿದರೆ ಎಲ್ಲ ಕೆಲಸಗಳೂ ಆಗುತ್ತವೆ. ದೇವರ-ದಿಂಡರ ಮೊರೆ ಹೋಗುವುದೇ ಬೇಡ… ಮಂದಿರಗಳನ್ನು ಸುತ್ತುವುದು ಬೇಡ.. ಅಲ್ಲಿನ ಚುನಾವಣೆಗೆ ಮುನ್ನ ಟ್ರಂಪೇಸಿ ಉಂಗುರ ತೆಗೆದುಕೊಂಡು ಹೋಗಿದ್ದ ಹಾಗಾಗಿ ಅತ ಬಂಪರ್ ಚಾನ್ಸ್ ಹೊಡೆದ. ರಷಿಯಾದ ಆ ಪುಟ್ಯಾ, ಚೀನಾದ ಜಿಂಗ್ಯಾ ಇವರೆಲ್ಲ ನಾನು ಕೊಟ್ಟ ಉಂಗುರವನ್ನೇ ಧರಿಸಿ ಮುಂದೆ ಬಂದಿದ್ದಾರೆ. ಎಲಾನ್ ಮಸ್ಕ್ ಆ ಉಂಗುರ ಧರಿಸಿದಾಗಿನಿಂದ ಆತನ ಅದೃಷ್ಟವೇ ಬದಲಾಗಿ ಹೋಗಿದೆ ಎಂದು ಸ್ವಯಂ ಘೋಷಿತ ದೇವಲೋಕದ ಸ್ಟ್ರಾಂಗ್ ದೇವತೆ ಎಂದು ಹೆಸರಾಗಿರುವ ಫಾಕಡಮ್ಮ ಹವಾ ಸೃಷ್ಟಿಸಿದಳು. ಅಷ್ಟಾದದ್ದೇ ತಡ… ಆಕೆಗೆ ಪುರುಸೊತ್ತೇ ಸಿಗಲಿಲ್ಲ. ಮದ್ರಾಮಣ್ಣನವರು ಕರೆ ಮಾಡಿ.. ನೋಡಮ್ಮಾ ಪಾಕ್ಡಮ್ಮ ನಂಗೆ ಉಂಗ್ರ ಬೇಕು ಎಂದು ಹೇಳಿದರು. ಬಂಡೆಸಿವು ಅಂತೂ ಫಾಕ್ಡಮ್ಮೋರೆ ನೀವು ಉಂಗುರ ಕೊಟ್ಟರೆ ಅದನ್ನು ಧರಿಸಿಕೊಂಡೇ ಸಿಎಂ ಆಗಿ ಪ್ರಮಾಣ ತೆಗೆದುಕೊಳ್ಳುತ್ತೇನೆ ಆಗ ನೀವು ಎಲ್ಲಿಂದ ಎಲ್ಲಿಗೆ ಹೋಗುತ್ತೀರಿ ನೋಡಿ ಎಂದು ಹೇಳಿದ್ದ. ಪಕ್ಕದ ಚಂದ್ರಣ್ಣನಂತೂ ಫಾಕ್ಡಮ್ಮಳ ಮುಂದೆ ನಿಂತು ನಂಗೆ ಉಂಗುರ ಬೇಕೇ ಬೇಕು ನೀವು ತಿಳಿಯಬೇಕು ನಾನು ಉಳಿಯಬೇಕು ಎಂದು ಹೇಳಿದ್ದ. ಡಿಂಗರ್‌ಬಿಲ್ಲಿಯ ಗೆಳೆಯ ಉಗ್ರೇಸಿ ಫೋನ್ ಮಾಡಿ ಹೇಗಾದರೂ ಮಾಡಿ ನಂಗೆ ಉಂಗುರಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ರಿಕ್ವೆಸ್ಟ್ ಮಾಡಿದ್ದ. ಇದರ ಮಧ್ಯೆ ಫಾಕ್ಡಮ್ಮಳು ಯಾವುದೋ ಮೂಡಿನಲ್ಲಿ ತನ್ನ ಅಳಿಯನಿಗೆ ಉಂಗುರ ಕೊಡುತ್ತೇನಪ್ಪ ಎಂದು ಪ್ರಾಮೀಸ್ ಮಾಡಿದ್ದಳು. ಈಗ ಅತ್ತೆಯ ಉಂಗುರದಲ್ಲಿ ಇಷ್ಟೊಂದು ಶಕ್ತಿ ಇದೆ. ನನಗೆ ಮೊದಲೇ ಪ್ರಾಮೀಸ್ ಮಾಡಿದ್ದಾಳೆ. ನನಗೆ ಕೊಟ್ಟೇ ಕೊಡುತ್ತಾಳೆ ಬಿಡು ಎಂದು ಆ ಅಳಿಯ ಅತ್ತೆಗೆ ಕೇಳಲು ಆರಂಭಿಸಿದ. ಮೊದಲ ಬಾರಿಗೆ ಕೇಳಿದಾಗ ಅಮವಾಸ್ಯೆ ದಿನ ಕೊಡುತ್ತೇನೆ ಅಂದಳು. ಅಮವಾಸ್ಯೆಗೆ ಹೋದರೆ ಹುಣ್ಣಿಮೆ ಅಂದಳು. ಹುಣ್ಣಿಮೆಗೆ ಹೋದರೆ ಜಾತ್ರೆ ದಿನ ಅಂದಳು. ಜಾತ್ರೆ ದಿನ ಹೋದರೆ ಊರ ಹಬ್ಬದ ದಿನ ಅಂದಳು. ಅಳಿಯನೂ ಜಿದ್ದಿನ ಮನುಷ್ಯ ಆಕೆ ಹೇಳಿದಾಗಲೆಲ್ಲ ಹೋಗಿ.. ಹೋಗಿ ಬಸವಳಿದು ಹೋಗಿದ್ದ. ಇವನು ಬಿಡುವುದಿಲ್ಲ ಎಂದು ಅರಿತ ಅತ್ತೆ… ಉಗಾದಿಗೆ ಗ್ಯಾರಂಟಿ ಕೊಡುತ್ತೇನೆ ಎಂದಳು ಅವರ ಅಳಿಯ ಉಗಾದಿಗೆ ಹೋಗಲು ಪ್ಲಾನ್ ಮಾಡಿದ್ದಾನೆ. ಫಾಕ್ಡಮ್ಮಳೂ ಸಹ ಉಗಾದಿಗೆ ಅಳಿಯ ಬಂದರೆ ನಾಳೆ ಬಾ ಅಂತ ಹೇಳಿಕಳಿಸುವುದಕ್ಕೆ ರೆಡಿ ಆಗಿದ್ದಾಳೆ.