ಬೆಳಗಾವಿ: ಪತಿ-ಪತ್ನಿಯರ ಜಗಳ ನಡೆದಾಗ ಮಧ್ಯ ಪ್ರವೇಶಿಸಿ ಸಮಾಧಾನ ಮಾಡುತ್ತಿದ್ದ ಅತ್ತೆಯ ಮೇಲೆ ಸೊಸೆ ಕುಡುಗೋಲಿನಿಂದ ಕೈ ಕಡಿದ ಘಟನೆ ನಡೆದಿದೆ.
ಮಾರಿಹಾಳ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು ಈ ತನಕ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಮಾರಿಹಾಳದ ಶಿಲ್ಪಾ ಹಾಗೂ ಆಕೆಯ ಪತಿ ನಾಗರಾಜನ ನಡುವೆ ಗಲಾಟೆಯಾಗಿದೆ. ಗಂಡನಿಗೆ ಅಡುಗೆ ಮಾಡಿ ಹಾಕದೆ ಉಪವಾಸ ಕೆಡವಿ ಬುದ್ಧಿ ಕಲಿಸಬೇಕು ಎಂದು ಶಿಲ್ಪಾ ಪ್ಲಾನ್ ಮಾಡಿದ್ದಳು. ಆದರೆ ಪತ್ನಿಯ ಐಡಿಯಾ ತಿಳಿದಿದ್ದ ಕಿಲಾಡಿ ನಾಗರಾಜ ತನ್ನ ತಾಯಿ ಜಾನವ್ವಳ ಮನೆಗೆ ಹೋಗಿ ಊಟ ಮಾಡಿ ಬಂದಿದ್ದ. ನನ್ನ ಗಂಡನಿಗೆ ನೀನ್ಯಾಕೆ ಬಡಿಸಿದೆ ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ನಾಗರಾಜ ನನ್ನ ಅಮ್ಮನ ಸುದ್ದಿಗೆ ಬರಬೇಡ ಎಂದಿದ್ದಾನೆ. ಗಂಡ ಹೆಂಡಿರ ಜಗಳ ಮತ್ತೆ ತಾರಕಕ್ಕೇರಿದೆ. ಆಗ ಇಬ್ಬರನ್ನೂ ಸಮಾಧಾನ ಪಡಿಸಲು ಮಧ್ಯೆ ಪ್ರವೇಶಿಸಿದ ಜಾನವ್ವಳ ಮೇಲೆ ಶಿಲ್ಪಾ ಜಗಳ ಮಾಡಿ ಕುಡಗೋಲಿನಿಂದ ಕೈಗೆ ಹೊಡೆದು ಗಾಯಗೊಳಿಸಿದ್ದಾಳೆ. ಜಾನವ್ವಳನ್ನು ಬೆಳಗಾವಿ ಬಿಮ್ಸ್‌ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
ನಾನೇನೂ ಮಾಡಿಲ್ಲ:
ನಾನು ನನ್ನ ಅತ್ತೆಯ ಮೇಲೆ ಹಲ್ಲೆ ನಡೆಸಿಲ್ಲ. ನಾನು ಎಂದಿನಂತೆ ನನ್ನ ಕೆಲಸದಲ್ಲಿಯೇ ತೊಡಗಿದ್ದೆ. ಅಮ್ಮ ಮತ್ತು ಮಗ ಸೇರಿಕೊಂಡು ನನ್ನ ಹೆಸರಿನಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಶಿಲ್ಪಾ ಸುದ್ದಿಗಾರರಿಗೆ ಹೇಳಿದ್ದಾಳೆ.