ದೇಶದಲ್ಲಿ ಅತೀ ಶ್ರೀಮಂತರ ಸಂಖ್ಯೆ ಅಧಿಕಗೊಂಡಿದೆ. ಈಗ ಅಮೆರಿಕ-ಚೀನಾ ಹೊರತುಪಡಿಸಿದರೆ ನಮ್ಮಲ್ಲೇ ಅತಿ ಹೆಚ್ಚು ಶ್ರೀಮಂತರು ಇದ್ದಾರೆ ಎಂಬುದು ಹೆಮ್ಮೆ ಪಡುವ ಸಂಗತಿ ಏನಲ್ಲ. ಅದು ನಮ್ಮಲ್ಲಿ ಬಡತನ ಹೆಚ್ಚಾಗಿರುವುದು ಹಾಗೂ ಆರ್ಥಿಕ ಅಸಮಾನತೆ ಹೆಚ್ಚಿರುವುದನ್ನು ತೋರಿಸುತ್ತದೆ. ನಮಗೆ ಬಡತನ ಪ್ರಮಾಣ ಕಡಿಮೆಯಾಗಿರುವುದು ಮುಖ್ಯ. ಆಗ ಆರ್ಥಿಕ ಅಸಮಾನತೆ ಕಡಿಮೆಯಾಗುತ್ತದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲರಿಗೂ ಸಮಾನವಾಗಿ ದೊರಕಿದರೆ ಸಮಾಜದ ಸರ್ವತೋಮುಖ ಬೆಳವಣಿಗೆ ಕಾಣಬಹುದು, ಈಗ ಬಡತನ ಗ್ರಾಮೀಣ ಪ್ರದೇಶದಲ್ಲಿ ಶೇ. ೪.೮೬ ಇದ್ದರೆ, ನಗರಗಳಲ್ಲಿ ಶೇ.೪.೦೯. ಕಡು ಬಡವರು ಇಲ್ಲ ಎಂಬುದೇ ಸಮಾಧಾನದ ಸಂಗತಿ. ಈಗ ಹಸಿವಿನಿಂದ ಸಾಯುವವರು ಯಾರೂ ಇಲ್ಲ. ಬೆಲೆಏರಿಕೆ ಮತ್ತು ಹಣದುಬ್ಬರ ಜನರನ್ನು ಕಾಡುತ್ತಿದೆ. ಎಸ್‌ಬಿಐ ಸಮೀಕ್ಷೆಯಂತೆ ನಿರುದ್ಯೋಗ ಶೇ. ೩.೨ಕ್ಕೆ ಇಳಿದಿದೆ. ಇದು ಮತ್ತಷ್ಟು ಕಡಿಮೆಯಾಗಬೇಕು ಎಂದರೆ ಭೂ ಒಡೆತನ ಸಮಾನವಾಗಿ ಹಂಚಿಕೆಯಾಗಬೇಕು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕು. ಅಗತ್ಯವಸ್ತುಗಳ ಬೆಲೆ ನಿಯಂತ್ರಣದಲ್ಲಿರಬೇಕು. ಸಮಾಜದ ಶೇ. ೧೦ರಷ್ಟು ಜನರಲ್ಲಿ ದೇಶದ ಒಟ್ಟು ಸಂಪತ್ತಿನಲ್ಲಿ ಶೇ. ೭೭ರಷ್ಟು ಕೇಂದ್ರೀಕೃತಗೊಂಡಿದೆ. ಸಮಾಜದ ಕೆಳಸ್ತರದಲ್ಲಿ ಶೇ. ೫೦ರಷ್ಟು ಜನರಲ್ಲಿ ಶೇ. ೪.೧ರಷ್ಟು ಸಂಪತ್ತಿದೆ. ಆದಾಯದಲ್ಲೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಇದಕ್ಕೆ ಪ್ರಮುಖ ಕಾರಣ ಸರ್ಕಾರಿ ನಿಯಂತ್ರಿತ ಸಂಸ್ಥೆಗಳು ಪ್ರಬಲವಾಗಿಲ್ಲದೆ ಇರುವುದು. ಖಾಸಗಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದಂತೆ ಶ್ರೀಮಂತಿಕೆ ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತಗೊಳ್ಳುವುದು ಸಹಜ. ಜಿಡಿಪಿ ಬೆಳವಣಿಗೆ ಶೇ.೬.೯ ಇದ್ದರೂ ಆರ್ಥಿಕ ಅಸಮಾನತೆ ಅಧಿಕಗೊಳ್ಳುತ್ತಿದೆ. ಅತಿ ಹೆಚ್ಚು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕೆಂಬ ಕೂಗೂ ಇದೆ. ಆರ್ಥಿಕ ಅಸಮಾನತೆ ಅಧಿಕಗೊಂಡಂತೆ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗುತ್ತವೆ. ಬಡವರಲ್ಲಿ ಶ್ರೀಮಂತರನ್ನು ನೋಡಿ ಕೋಪತಾಪ ಕಾಣಿಸಿಕೊಳ್ಳುವುದು ಸಹಜ. ಅದರಿಂದ ಸಮಾಜದಲ್ಲಿ ಅಶಾಂತಿ ತಲೆಎತ್ತುತ್ತದೆ. ಶ್ರೀಮಂತರಿಗೆ ತಮ್ಮ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವ ತವಕ ಇರುತ್ತದೆ. ಅವರು ರಾಜಕೀಯ ಅಧಿಕಾರವನ್ನು ತಮ್ಮ ಕೈಯಲ್ಲಿ ಹಿಡಿದಿಟ್ಟುಕೊಳ್ಳಲು ಯತ್ನಿಸುತ್ತಾರೆ. ಕೆಲವರು ತೆರಿಗೆ ವಂಚನೆ ಮಾಡಿ ಬೇರೆ ದೇಶಗಳಿಗೆ ಓಡಿಹೋಗಿ ಆಶ್ರಯ ಪಡೆಯುತ್ತಾರೆ. ಬಡವರ ತೆರಿಗೆ ಸಂಗ್ರಹದಲ್ಲಿ ಅನುಸರಿಸುವ ಕಾನೂನು ಕಟ್ಟಳೆಗಳು ಶ್ರೀಮಂತರಿಗೆ ಅನ್ವಯಿಸುವುದೇ ಇಲ್ಲ. ಅವರಿಗೆ ಎಲ್ಲ ರೀತಿಯ ರಿಯಾಯಿತಿ ದೊರಕುತ್ತದೆ. ತೆರಿಗೆ ಪಾವತಿ ಮಾಡದ ಶ್ರೀಮಂತರು ಜೈಲಿಗೆ ಹೋದ ಪ್ರಕರಣವೇ ಇಲ್ಲ. ಬಡವರ ಮನೆ ಮಾತ್ರ ಬಾಕಿ ಸಾಲಕ್ಕೆ ಮಾತ್ರ ಹರಾಜಾಗುತ್ತದೆ. ಅಧಿಕಾರ ಮತ್ತು ಹಣದ ವಿಕೇಂದ್ರೀಕರಣವೇ ಪ್ರಜಾಪ್ರಭುತ್ವದ ಜೀವಾಳ. ಇನ್ನೂ ಇದು ಕಾರ್ಯಗತವಾಗಿಲ್ಲ. ಗ್ರಾಮೀಣ ಮಟ್ಟದಲ್ಲಿ ಜನಪ್ರತಿನಿಧಿಗಳ ಸಂಸ್ಥೆಗಳನ್ನು ಬಲಪಡಿಸುವ ಕೆಲಸ ನಡೆಯುತ್ತಿಲ್ಲ. ಬಡವರಿಗೆ ೫ ಎಕರೆ ಭೂಮಿ ಉಳಿಸಿಕೊಳ್ಳುವುದು ಕಷ್ಟವಾಗಿದ್ದರೆ ಶ್ರೀಮಂತರ ಕೈಯಲ್ಲಿ ನೂರಾರು ಎಕರೆ ಹಾಗೆ ಇರುತ್ತದೆ. ಅವರಿಗೆ ನೆಲದ ಕಾನೂನು ಅನ್ವಯವಾಗುವುದೇ ಇಲ್ಲ. ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಅಧಿಕಗೊಂಡಿದ್ದು ಅದು ಹೊಸ ಶ್ರೀಮಂತರನ್ನು ಸೃಷ್ಟಿಮಾಡುತ್ತಿದೆ ಲೋಕಾಯುಕ್ತ ದಾಳಿ ಮಾಡಿದರೆ ನೋಟುಗಳ ಕಂತೆ ಕಂತೆ ಸಿಗುತ್ತದೆ. ಇದು ಭ್ರಷ್ಟಾಚಾರದ ಸಾಗರದಲ್ಲಿ ಒಂದು ಹನಿ ಮಾತ್ರ. ಈ ರೀತಿ ಹಣ ಮಾಡಿದವರೇ ಮುಂದೆ ಕೋಟ್ಯಧಿಪತಿಗಳ ಗುಂಪಿಗೆ ಸೇರುತ್ತಾರೆ. ಕರ್ನಾಟಕದಲ್ಲಿ ಕೆಲಸ ಮಾಡಿದ ಐಎಎಸ್ ಅಧಿಕಾರಿಯೊಬ್ಬರು ತಮಿಳುನಾಡಿನಲ್ಲಿ ಒಂದು ಪುಟ್ಟ ದ್ವೀಪವನ್ನೇ ಖರೀದಿ ಮಾಡಿದ್ದಾರೆ. ಅವರು ಈಗ ಶ್ರೀಮಂತರ ಪಟ್ಟಿಗೆ ಸೇರಿಕೊಂಡಿದ್ದಾರೆ. ಶ್ರೀಮಂತರ ಸಂಖ್ಯೆ ಅಧಿಕಗೊಳ್ಳುವುದು ಮುಖ್ಯವಲ್ಲ. ಬಡತನ ಇಳಿಮುಖಗೊಂಡಲ್ಲಿ ಅದೇ ದೇಶದ ನಿಜವಾದ ಸಂಪತ್ತು. ದುಡಿಯುವ ಎಲ್ಲ ಕೈಗಳಿಗೆ ಮೊದಲು ಕೆಲಸ ಕೊಡಬೇಕು. ಕಟ್ಟಕಡೆಯ ಮನುಷ್ಯನಿಗೆ ಮೊತ್ತ ಮೊದಲ ಅವಕಾಶ ಸಿಗಬೇಕು. ನಿಜವಾದ ಸರ್ವೋದಯ ಎಂದರೆ ಅದು. ಸ್ವಾತಂತ್ರö್ಯ ಬಂದಾಗ ಆಗಿನ ಜನ ಕಂಡ ಕನಸು ಬಹಳ ದೊಡ್ಡದಿತ್ತು. ಬಡತನ ಹೋಗಲಾಡಿಸಬೇಕು ಎಂದು ಬಯಸಿದ್ದರು. ಕಾನೂನು ಕಟ್ಟಳೆ ಕಡಿಮೆ ಇರಬೇಕೆಂದು ಬಯಸಿದ್ದರು. ಈಗ ಎಲ್ಲ ಪ್ರಕರಣಗಳೂ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿವೆ. ಬಡವರು ಅನ್ಯಾಯದ ವಿರುದ್ಧ ಹೋರಾಡಲು ಆರ್ಥಿಕ ಸಾಮರ್ಥ್ಯವಿಲ್ಲದ ಕಾರಣ ದೌರ್ಜನ್ಯ ಮತ್ತು ಅಸಮಾನತೆಯನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರದಲ್ಲಿರುವವರು ಬಡವರ ಪರ ನಿಂತಲ್ಲಿ ನ್ಯಾಯಾಲಯಕ್ಕೆ ಹೆಚ್ಚಿನ ಕೆಲಸ ಇಲ್ಲದಂತೆ ಮಾಡಬಹುದು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ತಿಂಗಳಿಗೊಮ್ಮೆ ಎಲ್ಲ ಕಡತಗಳನ್ನು ಜನರಿಗೆ ತೆರೆದಿಡುವ ಕೆಲಸ ನಡೆಯಬೇಕು. ಪಾರದರ್ಶಕ ಆಡಳಿತ ಲಂಚಾವತಾರವನ್ನು ಕಡಿಮೆ ಮಾಡುತ್ತದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಬಹುದು. ಈಗ ಶಾಸಕಾಂಗ-ಕಾರ್ಯಾಂಗ ಜನ ವಿರೋಧಿ ನಿಲುವು ತಳೆಯುತ್ತಿರುವುದರಿಂದ ಸಮಾಜದಲ್ಲಿ ಅಸಮಾನತೆ ಅಧಿಕಗೊಳ್ಳುತ್ತಿದೆ. ಅಧಿಕಾರ ಮತ್ತು ಹಣ ಕೇಂದ್ರೀಕೃತಗೊಳ್ಳಲು ಕಾರಣವಾಗುತ್ತಿದೆ.