ಒಂದು ಅಮಾನವೀಯ ಕೃತ್ಯ. ಮತ್ತೊಂದು ಅಮಾನುಷ ಹೇಯ ಘಟನೆ. ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಎರಡು ಘಟನೆಗಳು ಕೋಟ್ಯಂತರ ಮಂದಿಯ ಮನಸ್ಸುಗಳನ್ನು ಘಾಸಿಗೊಳಿಸಿದ್ದಷ್ಟೇ ಅಲ್ಲದೆ ಭಯವನ್ನೂ ಹುಟ್ಟಿಸಿವೆ.
ಎರಡಕ್ಕೂ ಕಾರಣ-ಬಿಗುವಿಲ್ಲದ ಕಾನೂನು, ಅನುಕಂಪ-ಮಾನವೀಯತೆಯ ಅಭಾವ, ಲಾಭಕೋರತನಕ್ಕೆ ಇಲ್ಲದ ಕಡಿವಾಣ. ಸರ್ಕಾರದ ಧೋರಣೆ ಮತ್ತು ಕಾರ್ಯ ಎರಡೂ ಜನದ್ರೋಹಿಯಾಗಿಯೇ ಇವೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ ದುಷ್ಕೃತ್ಯವು ಮನುಷ್ಯ ಎಷ್ಟು ಕ್ರೂರಿ ಎನ್ನುವುದನ್ನು ತೋರಿಸಿಕೊಟ್ಟಿದೆ. ಇಡೀ ಮನುಕುಲವೇ ತಲೆತಗ್ಗಿಸಿದರೆ, ಸೌಹಾರ್ದತೆಗೆ, ನಂಬಿಕೆಗೆ ಧಕ್ಕೆ ಉಂಟುಮಾಡಿದೆ. ಸಮಾಜದ ಒಪ್ಪಿತ ಪುಣ್ಯಕೋಟಿ ಎಂಬ ಪೂಜನೀಯ ಗೋಮಾತೆ ಪಟ್ಟ ನೋವು ಎಲ್ಲರ ಹೃದಯವನ್ನು ಕಲಕಿದೆ. ಛೇ, ಎಂಥ ಅಮಾನುಷ ಕೃತ್ಯ ಎಂದು ಉದ್ಗರಿಸಿದವರು, ಹಳಹಳಿಸಿದವರು, ನೊಂದವರು ಇಲ್ಲದಿಲ್ಲ. ಆತ ಕುಡುಕ. ವಿಕೃತ ಮನಸ್ಸಿನ ಸಂಸ್ಕಾರರಹಿತ ಹುಚ್ಚುಖೋಡಿ ಎಂದು ಈಗ ಆತನ ಬಂಧನದ ನಂತರ ಹೇಳಲಾಗುತ್ತಿದೆ. ಆದರೂ ಜನತೆಯಲ್ಲಿ ಅನುಮಾನ ಮಾತ್ರ ಹೋಗಿಲ್ಲ. ಕಾರಣ, ಚಾಮರಾಜಪೇಟೆಯ ಪರಿಸರ ಮತ್ತು ಅಲ್ಲಿಯ ಆಡಳಿತ. ಕೆಲವು ವರ್ಷಗಳಿಂದ ನಡೆಯುತ್ತಿರುವ ಗೂಂಡಾಗಿರಿ, ಅಟ್ಟಹಾಸ, ದಾಂಧಲೆಗಳು ಭಯಪಡಿಸುತ್ತಿವೆ. ಸಂಜೆಯಾದರೆ ಮಹಿಳೆಯರು, ಮಕ್ಕಳು, ವೃದ್ಧರು, ಅಮಾಯಕರು ಓಡಾಡಲಾಗದ ಭಯದ ಸ್ಥಿತಿಯಲ್ಲಿ ಆ ಏರಿಯಾ ಕುಖ್ಯಾತಿಯನ್ನು ಪಡೆದುಕೊಂಡಿದೆ.
ಅಲ್ಲಿ ನಡೆದಿರುವಷ್ಟು ರಿಯಲ್ ಎಸ್ಟೇಟ್ ದಾಂಧಲೆಗಳು, ಅಕ್ರಮ ವ್ಯವಹಾರಗಳು, ರಾಜಕೀಯ ಜಿದ್ದಾಜಿದ್ದಿ, ಪ್ರತಿಷ್ಠೆಗಳು ಇವೆಲ್ಲವೂ ಆಕಳ ಕೆಚ್ಚಲ ಕೊಯ್ಯುವವರೆಗೆ ಬಂದು ನಿಂತಿವೆ. ಆಕಳು ಸಾಕಿದ ವ್ಯಕ್ತಿಯ ಹೆಸರು ಕರ್ಣ. ಹಾಲು ಮಾರಿಯೇ ಆತನ ಉಪಜೀವನ. ಆ ಗೋವುಗಳಿಗೆ ಆದ ನೋವಿನಿಂದ ಘಾಸಿಗೊಳಗಾದ ವ್ಯಕ್ತಿ ತನ್ನ ಮೂಕ ಗೋಮಾತೆ ಏನು ಮಾಡಿತ್ತು ಎಂದು ನೋವುಂಡಿದ್ದಾನೆ.
ಇಷ್ಟಕ್ಕೂ ಈ ರಾಜ್ಯದಲ್ಲಿ ಗೋಹಿಂಸೆ, ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಒಂದೂರಿನಿಂದ ಮತ್ತೊಂದೂರಿಗೆ ಜಾನುವಾರು ಸಾಗಿಸಲೂ ಪರವಾನಗಿ ಪಡೆಯಬೇಕಾದ, ಒಂದೇ ವಾಹನದಲ್ಲಿ ಹತ್ತಾರು ಜಾನುವಾರು ತುಂಬಿ ಹಿಂಸೆ ನೀಡಿದರೆ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ. ಇಂತಹ ರಾಜ್ಯದಲ್ಲಿ ಕೆಚ್ಚಲು ಕತ್ತರಿಸಿದ ವ್ಯಕ್ತಿಗೆ ಯಾವ ಶಿಕ್ಷೆ?
ಇಂತಹ ವಿಕೃತಿಯನ್ನು ನಿಯಂತ್ರಿಸಲಾಗದ ಕಾನೂನು ಇದ್ದರೆಷ್ಟು ಸತ್ತರೆಷ್ಟು ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಆಕಳು ಕೆಚ್ಚಲು ಕತ್ತರಿಸಿದ ನಂತರ ಕೆಚ್ಚಲು ರಾಜಕೀಕರಣ'ಗೊಳಿಸಿದ ಬಗ್ಗೆಯೂ ಅದರದ್ದೇ ಆದ ಅಪಸವ್ಯಗಳಿವೆ. ಚಾಮರಾಜಪೇಟೆಯ ಶಾಸಕರು ಈ ಕರ್ಣನಿಗೆ ಮೂರು ಆಕಳು ಕೊಡಿಸುವ ಭರವಸೆಯನ್ನು ನೀಡಿದ್ದು ಒಂದಾದರೆ, ಮುಖ್ಯಮಂತ್ರಿಗಳು
ಛೇ! ಎಂತಹ ವಿಕೃತ ಕೃತ್ಯ? ಯಾರೇ ಆಗಲಿ ಶಿಕ್ಷೆ ಖಂಡಿತ’ ಎಂದು ಸಾರಿದ್ದಾರೆ. ಅಷ್ಟರ ಮಟ್ಟಿಗೆ ಜನತೆಗೇನೋ ಭರವಸೆ ಇದೆ. ಆದರೆ ಆಕಳು ಕೆಚ್ಚಲು ಕತ್ತರಿಸುವಷ್ಟು ಧಾರ್ಷ್ಟ್ಯ, ದುರುಳತನ ಈ ನೆಲದಲ್ಲಿ ಬೆಳೆಯಿತಲ್ಲ!? ಅದನ್ನು ಚಿವುಟಿಹಾಕುವ ಕೆಲಸ ಮೊದಲಾಗಬೇಕಿದೆ. ಹಾಗೇ ಚಾಮರಾಜಪೇಟೆಯಲ್ಲಿ ನಿರ್ಭಯ ವಾತಾವರಣ ನಿರ್ಮಾಣ ಆಗಬೇಕಿದೆ.
ಇನ್ನೊಂದು ಘಟನೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ನೂರಾರು ಕುಟುಂಬಗಳು ಊರು ತೊರೆದು ಹೋದದ್ದು! ಚಾಮರಾಜನಗರದ ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮಗಳ ನೂರಾರು ಕುಟುಂಬಗಳು ಮನೆಗೆ ಬೀಗ ಹಾಕಿ ಮಕ್ಕಳು-ಮರಿ ಕಟ್ಟಿಕೊಂಡು ಊರು ಬಿಟ್ಟಿವೆ. ಸಾಲ ನೀಡಿದ ಮೈಕ್ರೋ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳ ವಸೂಲಿದಾರರಿಂದ ನಡೆದ ದಬ್ಬಾಳಿಕೆ, ಕಿರುಕುಳ ಇವರನ್ನು ಊರು ತೊರೆಯುವಂತೆ ಮಾಡಿವೆ.
ರಾಜ್ಯದಲ್ಲಿ ಹರಡಿಕೊಂಡಿರುವ ಸಾವಿರಾರು ಸ್ವಸಹಾಯ ಸಂಘಗಳು ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯವಹಾರಕ್ಕೆ ಯಾರ-ಯಾವ ನಿಯಂತ್ರಣವಿಲ್ಲದ ಕಾರಣ ಈಗ ನಿತ್ಯವೂ ಸಾಲ ಪಡೆದವರ ಆತ್ಮಹತ್ಯೆ ಅಥವಾ ಜಪ್ತಿ ಇತ್ಯಾದಿಗಳೇ ಘಟಿಸುತ್ತಿವೆ. ಈ ಮೊದಲು ಖಾಸಗಿ ಲೇವಾದೇವಿದಾರರಿದ್ದರು. ಅವರಲ್ಲಿಯೇ ದೊಡ್ಡ ದೊಡ್ಡ ವ್ಯಾಪಾರಸ್ಥರಿಂದ ಚಿಕ್ಕಪುಟ್ಟ ದೈನಂದಿನ ಖರ್ಚಿಗೂ ಹಣ ಪಡೆದು ಬಡ್ಡಿ ಚಕ್ರಬಡ್ಡಿ ನೀಡಿ ಸುಸ್ತಾದವರು ಎಷ್ಟೋ. ಆ ನಂತರ ಖಾಸಗಿ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ತಲೆ ಎತ್ತಿದ ಮೇಲೆ ಸಾಲ ವಸೂಲಿಗೆ ಕಾಯ್ದೆ ಕಟ್ಟಳೆ ಬಂತು.
ತಕ್ಷಣ ಬೇಕಿದ್ದರೆ ಹಣ ದೊರೆಯದ ಮತ್ತು ದಾಖಲೆ ಪೂರೈಸಿ ಸುಸ್ತಾಗುವ ಮಂದಿಗೆ ಈ ಮೈಕ್ರೋ ಫೈನಾನ್ಸ್‌ಗಳು ಮತ್ತು ಸ್ವಸಹಾಯ ಸಂಘಗಳು ಸಾಲ ಪಡೆಯುವ ಪಾಕೆಟ್‌ಗಳಾದವು. ಈ ಫೈನಾನ್ಸ್ ಕಂಪನಿಗಳೂ ಅಷ್ಟೇ. ಟಾರ್ಗೆಟ್‌ನೊಂದಿಗೆ ಊರಿಗೆ ಬೀಳುವ ಅವರ ಪ್ರತಿನಿಧಿಗಳು ಕೇವಲ ವೋಟರ್ ಐಡಿ, ಆಧಾರ್ ಕಾರ್ಡ್ ಮೇಲೆಯೇ ಜನ ಕೇಳಿದಷ್ಟು ಹಣ ನೀಡಲಾರಂಭಿಸಿದರು. ಮಾಸಿಕ ಕಂತು ಮತ್ತು ಅದರ ಬಡ್ಡಿ, ಇಎಂಐ ಇತ್ಯಾದಿಗಳನ್ನು ತುಂಬಿಯೇ ಜನ ಈಗ ಹೈರಾಣಾಗುತ್ತಿದ್ದಾರೆ.
ಒಂದು ಕಂತು ಬಾಕಿ ಉಳಿಯಿತೆಂದರೆ ಮನೆ ಬಾಗಿಲಿಗೆ ವಸೂಲಿಗಾರರು ಬರುತ್ತಾರೆ. ಅವಾಚ್ಯ ಮಾತು, ಬೈಗುಳ, ಹೇಯ ವರ್ತನೆ, ದಬ್ಬಾಳಿಕೆಗಳೇ ಇಂತಹ ಪ್ರತಿನಿಧಿಗಳಿಂದ. ಹಾಗೆಯೇ ಬಡ್ಡಿ ತೆತ್ತು ತೆತ್ತು ಸುಸ್ತಾದರೂ ಅಸಲು ಮಾತ್ರ ಕರಗುವುದೇ ಇಲ್ಲ!
ಇದರೊಂದಿಗೆ ಸ್ವಸಹಾಯ ಸಂಘಗಳು… ವಿಶೇಷವಾಗಿ ಮಹಿಳೆಯರು ತಾವೇ ಗುಂಪು ರಚಿಸಿಕೊಂಡು ಹಣ ಹೂಡಿ ತಮ್ಮಲ್ಲಿ ಸಂಗ್ರಹವಾದ ಹಣದಿಂದ ಸಾಲ ಪಡೆಯುವುದು. ತರಕಾರಿ ಮಾರಾಟ, ಹಪ್ಪಳ-ಸಂಡಿಗೆ ಮಾರಾಟ, ಅಥವಾ ಮನೆಯ ಖರ್ಚುವೆಚ್ಚ, ಮದುವೆ-ಮುಂಜಿ, ಹಬ್ಬ-ಹುಣ್ಣಿಮೆ ಇತ್ಯಾದಿಗಳಿಗೆ ಮಹಿಳೆಯರಿಗೆ ಬೇಕಾಗುವ ಖರ್ಚಿಗೆ ಈ ಸ್ವಸಹಾಯ ಸಂಘಗಳಿಂದ ಹಣ ಪಡೆಯುವುದು. ನಂತರ ಕಂತಿನಲ್ಲಿ ತೀರಿಸುವುದು. ಸ್ವಸಹಾಯ ಸಂಘಗಳ ಬಡ್ಡಿ ಊಹಿಸಲೂ ಸಾಧ್ಯವಿಲ್ಲ. ನಲವತ್ತು ಸಾವಿರ ಸಾಲ ಪಡೆದು ನಲವತ್ತು ಲಕ್ಷ ರೂಪಾಯಿ ತೆತ್ತರೂ ಇನ್ನೂ ಅಸಲು ಹಾಗೇ ಉಳಿದಿರುತ್ತದೆ. ಹಾಗೇ ತಮ್ಮ ಗುಂಪಿನ ಯಾರೊಬ್ಬ ಸಾಲ ಪಡೆದು ನಿಧನರಾದರೂ, ಮರು ಪಾವತಿಸದೆ ಓಡಿಹೋದರೂ, ಉಳಿದ ಮಂದಿ ಅದಕ್ಕೆ ಬಾಧ್ಯಸ್ಥರು! ಅಷ್ಟಲ್ಲದೆ ಪಾವತಿಸದ ಮಹಿಳೆಯರ ಮನೆಯ ಮುಂದೆ ಇಡೀ ಗುಂಪೇ ನೆರೆದು ವಾಚಾಮಗೋಚರ, ಪುಂಖಾನುಪುಂಖ ಮಾತುಗಳಿಂದ ಬಯ್ಯುತ್ತಾರೆ. ಗುಂಪಿನಲ್ಲಿಯೂ ಕೂಡ ಯರ‍್ಯಾರದ್ದೋ ಹೆಸರಿನಲ್ಲಿ ಇನ್ಯರ‍್ಯಾರೋ ಹಣ ಪಡೆದು ತೀರಿಸಲಾಗದೆ ಮತ್ತೊಂದಿಷ್ಟು ಅಧ್ವಾನಗಳು. ಸದ್ಯಕ್ಕಂತೂ ಮೈಕ್ರೋ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳ ವ್ಯವಹಾರದಿಂದ ರಾಜ್ಯದಲ್ಲಿ ಮಹಿಳೆಯರ ಮತ್ತು ಬಡ ಅಸಹಾಯಕ ಕೂಲಿಕಾರರ ಸಾವು, ಆತ್ಮಹತ್ಯೆ ಸಂಭವಿಸುತ್ತಲೇ ಇವೆ. ಹೆಗ್ಗವಾಡಿಪುರಕ್ಕೆ ತಹಶೀಲ್ದಾರ್ ಭೇಟಿ ನೀಡಿದಾಗ ಅಲ್ಲಿಯ ನೂರಾರು ಮನೆಗಳಿಗೆ ಬೀಗ ಜಡಿದಿತ್ತು. ಮಕ್ಕಳ ಶಾಲೆ ಬಿಡಿಸಿ ಕರೆದೊಯ್ದಿದ್ದರು ಗ್ರಾಮಸ್ಥರು. ವಿದ್ಯಾರ್ಥಿಯೊಬ್ಬ ತಹಶೀಲ್ದಾರರಿಗೆ, ನನ್ನ ಅಪ್ಪ ಅಮ್ಮನ ಸಾಲಕ್ಕೆ ನನ್ನ ಕಿಡ್ನಿ ತೆಗೆದುಕೊಳ್ಳಿ, ದಯವಿಟ್ಟು ಹಣಕಾಸು ಕಂಪನಿಗಳ ಅಧಿಕಾರಿಗಳ ಕಿರುಕುಳವನ್ನು ತಪ್ಪಿಸಿ' ಎಂದು ಗೋಗರೆದಿದ್ದ! ಹುಬ್ಬಳ್ಳಿಯಲ್ಲಿ ಫೈನಾನ್ಸ್ ಕಂಪನಿಯೊಂದು ತನ್ನ ಕಂತು ತುಂಬಿಲ್ಲವೆಂದು ಗರ್ಭಿಣಿಯನ್ನು ಪಾತ್ರೆಪಗಡೆ ಸಮೇತ ಹೊರಗೆ ಹಾಕಿ ಮನೆಗೆ ಬೀಗ ಹಾಕಿತ್ತು! ಮಹಿಳೆಯರ ಮಾಂಗಲ್ಯ ಮತ್ತಿತರ ಒಡವೆಗಳು, ನರೇಗಾ ಕೂಲಿ ಕೂಡ ಈ ಫೈನಾನ್ಸ್ ಕಂಪನಿಗಳ ಕೈಸೇರಿವೆ. ಹಾಗಂತ ಸ್ವಸಹಾಯ ಸಂಘಗಳು, ಫೈನಾನ್ಸ್ ಕಂಪನಿಗಳ ವಾದವೇ ಬೇರೆ. ಪಶು ಸಂಗೋಪನೆ, ಕೃಷಿ, ಮಕ್ಕಳ ಶಿಕ್ಷಣ, ಅಂಗಡಿ, ವ್ಯಾಪಾರ ವ್ಯವಹಾರಗಳಿಗೆ ಸಾಲ ಪಡೆದು ಈ ಉದ್ದೇಶಗಳಿಗೆ ಬಳಸಿಕೊಳ್ಳದೆ ಅಂಧಾದುಂಧಿ ಖರ್ಚು ಮಾಡಿದ್ದಾರೆ; ಆದ್ದರಿಂದ ಹಣ ಮರಳಿ ಬರುವುದಿಲ್ಲ ಎನ್ನುವುದು ಇವುಗಳು ಮಾಡುವ ಆರೋಪ. ಇಂತಹ ಸಾಲ ನೀಡುವ ಸಂಸ್ಥೆಗಳ ವಾದಗಳೇನೇ ಇರಲಿ, ವಾಸ್ತವವಾಗಿ ಈ ಫೈನಾನ್ಸ್ ಕಂಪನಿಗಳ ನಡುವಿನ ಪೈಪೋಟಿ, ಸ್ವಸಹಾಯ ಸಂಘಗಳ ವ್ಯವಹಾರ ಒಟ್ಟಾರೆ ಸಂಶಯಾಸ್ಪದ ಮತ್ತು ಅನಿಯಂತ್ರಿತ. ಸಾಲ ಕೊಡುವಾಗ ಯಾವ ದಾಖಲೆ, ಅಡಮಾನ ಕೇಳದವರು ನಂತರ ಏಕಾಏಕಿ ವಸೂಲಿಗೆ ರಾಕ್ಷಸ ರೂಪವನ್ನು ತಾಳುತ್ತಾರೆ. ಗೂಂಡಾಗರ್ದಿ, ಭುಜಬಲ ಪ್ರದರ್ಶನವಾಗುತ್ತದೆ. ಹಲವು ಮೈಕ್ರೋ ಫೈನಾನ್ಸ್ ಕಂಪನಿಗಳು ಸೆಕ್ಯೂರಿಟಿ ಏಜೆನ್ಸಿಗಳಿಗೆ ವಸೂಲಾತಿ ಹೊಣೆ ನೀಡಿವೆ. ಅವರಂತೂ ಯಮಕಿಂಕರರ ರೀತಿ. ಸರ್ಕಾರ ಏಕೆ ಇವನ್ನು ನಿಯಂತ್ರಿಸುತ್ತಿಲ್ಲ? ಇದೇ ಮೊದಲ ಪ್ರಶ್ನೆ. ಮೈಕ್ರೋಫೈನಾನ್ಸ್ ವ್ಯವಹಾರಗಳ ಬಗ್ಗೆ ಯಾವ ಆಡಿಟ್ ಇಲ್ಲ. ಪಾರದರ್ಶಕತೆ ಇಲ್ಲ. ಆರ್ಥಿಕ ನಿಯಂತ್ರಣಗಳಿಲ್ಲ. ಶಿಸ್ತಿಲ್ಲ. ಕಾನೂನು ಕಟ್ಟಳೆಗಳಿಲ್ಲ. ಕೇವಲ ನೋಂದಣಿ ಮಾಡಿಸಿಕೊಂಡರಾಯಿತು. ಹಿಂದಿನ ಮೀಟರ್ ಬಡ್ಡಿದಾರರೇ ಈಗ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮಾಲೀಕರು! ದೊಡ್ಡ ದೊಡ್ಡ ಮಹಾನ್ ದಾನಿಗಳು, ಧರ್ಮಭೀರುಗಳು, ದೇವರುಗಳ ಫೋಟೋ ಹಾಕಿಕೊಂಡು ಮೈಕ್ರೋ ಫೈನಾನ್ಸ್ ಹಾಗೂ ಎನ್.ಜಿ.ಒ. ಸ್ಥಾಪಿಸಿದರೂ ವಸೂಲಾಗುವುದು ಮೀಟರ್ ಬಡ್ಡಿಯೇ. ಮುಂಜಾನೆ ಎರಡು ಸಾವಿರ ರೂಪಾಯಿ ತರಕಾರಿ ವ್ಯಾಪಾರಕ್ಕೆ ಕೊಟ್ಟು ಸಂಜೆ ಮೂರು ಸಾವಿರ ರೂಪಾಯಿ ಮರಳಿ ಪಡೆಯುವ ದಂಧೆಯೇ ಈಗ ಚಾಲ್ತಿಯಲ್ಲಿದೆ. ಅಂದರೆ ಶೇ. ೫೦ರಷ್ಟು ದಿನಬಡ್ಡಿಯಾಯಿತು! ಇದರೊಟ್ಟಿಗೆ ಯಾರ ಮೊಬೈಲ್ ಎತ್ತಿದರೂ
ನಿಮಗೆ ಸಾಲ ಬೇಕಾ? ತಕ್ಷಣ ಮಂಜೂರು ಮಾಡುತ್ತೇವೆ’ ಎಂದು ಅವರ ಮೊಬೈಲ್-ಆಧಾರ್ ಲಿಂಕ್‌ನೊಂದಿಗೆ ಹಣ ನೀಡುವ ಕಂಪನಿಗಳು. ಆತ ತುಂಬದೆ ಇದ್ದಾಗ ಮಾನ ಹರಾಜು. ಅಶ್ಲೀಲ, ಅಸಭ್ಯ ಫೋಟೋಗಳನ್ನು ಸಾಲ ಪಡೆದವರ ಸ್ನೇಹಿತರಿಗೆಲ್ಲ ಕಳಿಸಿ ರಾತ್ರಿ ಹಗಲೆನ್ನದೆ ಕಿರುಕುಳ. ಅಷ್ಟಕ್ಕೂ ಹಣ ಬಾರದಿದ್ದರೆ ಸೆಕ್ಯೂರಿಟಿ ಏಜೆನ್ಸಿಗಳಿಂದ ಹಿಂಸೆ. ಸಾಲ ಬೇಡ ಎನ್ನುವ ವ್ಯಕ್ತಿಯನ್ನು ಟೆಂಪ್ಟ್ ಮಾಡಿ ಸಾಲ ನೀಡುವ ವ್ಯವಹಾರವೂ ಈಗ ನಡೆಯುತ್ತಿದೆ. ಒಬ್ಬ ವ್ಯಕ್ತಿ ಎಷ್ಟು ಸಾಲ ಪಡೆಯಬಹುದು? ಆತನ ಆದಾಯವೇನು ಇತ್ಯಾದಿ ಯಾವುದನ್ನೂ ಗಮನಿಸದೆ ಬೇಕಾಬಿಟ್ಟಿ ಸಾಲ ನೀಡುವುದು ಮತ್ತು ನಂತರ ವಸೂಲಿಗೆ ಹಿಂಸಿಸುವುದು… ಇದು ನಡೆಯುತ್ತಲೇ ಇದೆ.
ಈ ಹಿಂದೆ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಇತ್ತು. ಅದರ ನಿಯಂತ್ರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಿಗಿ ಕಾನೂನು ತಂದವು. ಲೇವಾದೇವಿ ವ್ಯವಹಾರವನ್ನು ಲೈಸೆನ್ಸ್ ವ್ಯಾಪ್ತಿಗೆ ತರಲಾಯಿತು. ಈಗ ಮೈಕ್ರೋ ಫೈನಾನ್ಸ್ ಹಾಗೂ ಸ್ವಸಹಾಯ ಸಂಘಗಳ ನಿಯಂತ್ರಣಕ್ಕೆ ಯಾವ ವ್ಯವಸ್ಥೆಯೂ ಇಲ್ಲ. ಮಾಫಿಯಾ ದಂಧೆ'ಯಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ, ಗೃಹಮಂತ್ರಿಗಳ ತವರಿನಲ್ಲಿಯೇ ಸಾಲ ದಂಧೆಕೋರರ ಕಪಿಮುಷ್ಟಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ. ಬೆಳಗಾವಿಯ ಯಮುನಾಪುರದಲ್ಲಿ ಏಳು ಸಾವಿರಕ್ಕೂ ಹೆಚ್ಚು ಸಂತ್ರಸ್ತ ಮಹಿಳೆಯರು,
ತಮಗೆ ಈ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ೧೯ ಕೋಟಿಯಷ್ಟು ವಂಚನೆಯಾಗಿದೆ. ಸ್ವಸಹಾಯ ಸಂಘಗಳಿಂದ ಮೋಸ ಹೋಗಿದ್ದೇವೆ’ ಎಂದು ದೂರು ನೀಡಿದ್ದಾರೆ.
ಇದರ ನಿಯಂತ್ರಣಕ್ಕೆ ಸರ್ಕಾರ ಕ್ರಮಕ್ಕಿಳಿಯಲೇಬೇಕಾಗಿದೆ. ಆರ್‌ಬಿಐ ಮತ್ತು ಸಹಕಾರಿ ಕಾನೂನು ಮೈಕ್ರೋ ಫೈನಾನ್ಸ್‌ಗಳನ್ನು ಬೆಂಬಲಿಸಿವೆ. ಬ್ಯಾಂಕುಗಳು ನೀಡಲಾಗದ್ದನ್ನು ಈ ಫೈನಾನ್ಸ್ ಕಂಪನಿಗಳು ಕೊಡುತ್ತಿವೆ ಎಂದು ಮೊದಮೊದಲು ಪ್ರಶಂಸಿಸಲಾಯಿತು. ಮೈಕ್ರೋ ಫೈನಾನ್ಸ್‌ಗಳ ಸೂತ್ರಧಾರ ಮೊಹಮ್ಮದ್ ಯೂನುಸ್ (ಪ್ರಸ್ತುತ ಬಾಂಗ್ಲಾದ ಪ್ರಧಾನಿ)ಅವರಿಗೆ ನೊಬೆಲ್ ಅವಾರ್ಡ್ ಕೂಡ ನೀಡಲಾಯಿತು. ದೇಶದ ೪೫ ಕೋಟಿ ಕುಟುಂಬಗಳಲ್ಲಿ ೧೫ರಿಂದ ೧೭ ಕೋಟಿ ಕುಟುಂಬಗಳಿಗೆ ತುರ್ತು ಸಾಲಗಳ ಅನಿವಾರ್ಯತೆ ಇದೆ ಎಂದು ಒಂದು ಸಮೀಕ್ಷೆ ಹೇಳಿದೆ. ಅವರ ಉದ್ಯಮ, ವ್ಯವಹಾರ, ಬದುಕಿನ ಅಭಿವೃದ್ಧಿಗಾಗಿ ಸಾಲದ ಅಗತ್ಯವಿದೆ. ನೋಟು ರದ್ದತಿಯಿಂದಾಗಿ ೨೦೧೬-೧೭ರಲ್ಲಿ ಹಣಕಾಸು ಸಂಸ್ಥೆಗಳ ಸಾಲ ಮರುಪಾವತಿ ಇಳಿಮುಖವಾದಾಗ, ಕೋವಿಡ್ ನಂತರ ಉತ್ಪಾದನ ವಲಯ ತತ್ತರಿಸಿದಾಗ ಸಾಲ ಕೊಡುವ ಸಂಸ್ಥೆಗಳು ಅಣಬೆ ರೀತಿ ತಲೆ ಎತ್ತಿದವು.
ಕಂದಾಯ ಮಂತ್ರಿಗಳೇನೋ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಮಾನವೀಯವಾಗಿ ವರ್ತಿಸುವುದಕ್ಕೆ ಕಾನೂನು ರೂಪಿಸುವುದಾಗಿ ಘೋಷಿಸಿದ್ದಾರೆ. ಆದರೆ ಎಂದು ಯಾವಾಗ ಗೊತ್ತಿಲ್ಲ. ಈ ಮೈಕ್ರೋ ಫೈನಾನ್ಸ್ ಮತ್ತು ಸಣ್ಣ ಪ್ರಮಾಣದ ಸಾಲ ನೀಡುವವರ ವಸೂಲಿದಾರರ ದಾಳಿಯಿಂದ ಆಘಾತಗೊಂಡ ಅವಿಭಜಿತ ಆಂಧ್ರಪ್ರದೇಶ ೨೦೧೦ರಲ್ಲೇ ಮೈಕ್ರೋ ಫೈನಾನ್ಸ್ ಕಂಪನಿಗಳ ನಿಯಂತ್ರಣ ಕಾಯ್ದೆ ಜಾರಿಗೆ ತಂದಿತ್ತು. ಇದರ ಕಟ್ಟುನಿಟ್ಟಿನ ಅನುಷ್ಠಾನದಿಂದ ಮೈಕ್ರೋ ಫೈನಾನ್ಸ್ ಕಂಪನಿಗಳು ಆಂಧ್ರದಿಂದ ಕಾಲ್ಕಿತ್ತವು. ಅಂಥ ಸಂಸ್ಥೆಗಳು ಈಗ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಅಂಗಡಿ ತೆರೆದಿವೆ. ಕರ್ನಾಟಕ ಕೂಡ ಇವುಗಳನ್ನು ನಿಯಂತ್ರಿಸುವ ಕಾಯ್ದೆ ತರಲೇಬೇಕು. ಜನಪ್ರತಿನಿಧಿಗಳು, ಶಾಸಕರುಗಳು, ಮಠಮಾನ್ಯಗಳು ನೇರವಾಗಿ ಅಥವಾ ಪರೋಕ್ಷವಾಗಿ ಈ ದಂಧೆಯಲ್ಲಿ ತೊಡಗಿರುವುದರಿಂದ ಕಂದಾಯ ಮಂತ್ರಿಗಳಿಗೆ ಇದೆಯೇ ಅಂತಹ `ಇಚ್ಛಾಶಕ್ತಿ?!’
ವಿಕೃತಿ, ವಿಧ್ವಂಸಕರ ಅಟ್ಟಹಾಸದಲ್ಲಿ ಮಾನವೀಯತೆಗೆ, ಮನುಷ್ಯತ್ವಕ್ಕೆ ಎಲ್ಲಿದೆ ಜಾಗ?