ಬೆಂಗಳೂರು: ಅಕ್ಷಯ ತೃತೀಯ ಮುನ್ನವೇ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ಚಿನ್ನ ಖರೀದಿಯೊಂದಿಗೆ ಅಕ್ಷಯ ತೃತೀಯ ಅದ್ಧೂರಿ ಆಚರಣೆ ಮಾಡಬೇಕೆಂದುಕೊಂಡವರಿಗೆ ನಿರಾಸೆಯಾಗಿದೆ.
ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಜನರು ಲಕ್ಷ್ಮೀ ದೇವಿಯನ್ನು ತಮ್ಮ ಮನೆಗೆ ಸ್ವಾಗತಿಸಲು ಮತ್ತು ಸಮೃದ್ಧಿಗಾಗಿ ಚಿನ್ನವನ್ನು ಸ್ವಲ್ಪ ಪ್ರಮಾಣದಲ್ಲಾದರೂ ಖರೀದಿಸುತ್ತಾರೆ. ಈಗ ಸಂಭ್ರಮ ಕಗ್ಗಂಟಾಗಿ ಹೋಗುತ್ತಿದೆ. ಮತ್ತೊಂದೆಡೆ, ಚಿನ್ನದ ಬೆಲೆಗಳು ದಿನದಿಂದ ದಿನಕ್ಕೇರುತ್ತಿರುವ ಪರಿಣಾಮ ಚಿನ್ನ ಖರೀದಿಗೆ ಅನೇಕರು ಹಿಂದೆ ಸರಿಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದಂತೆ ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೆ ಚಿನ್ನ ಖರೀದಿ ಕನಸಿನ ಮಾತಾಗುತ್ತಿದೆ.
ರಿಯಾಯಿತಿಗಳು ಮತ್ತು ಉಡುಗೊರೆಗಳು
ಗ್ರಾಹಕರನ್ನು ಆಕರ್ಷಿಸಲು ಆಭರಣ ವ್ಯಾಪಾರಿಗಳು ವಿವಿಧ ಕೊಡುಗೆಗಳನ್ನು ನೀಡುತ್ತಿದ್ದಾರೆ. ಕೆಲವರು ೧೦ ಗ್ರಾಂ ಚಿನ್ನ ಖರೀದಿಸಿದರೆ ಉಚಿತ ಉಡುಗೊರೆ ಸೇರಿದಂತೆ ಇತರೆ ಅವಕಾಶ ನೀಡಲು ಮುಂದಾಗುತ್ತಿದ್ದಾರೆ. ಹೆಚ್ಚುತ್ತಿರುವ ಚಿನ್ನದ ದರ ತಗ್ಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಚಿಲ್ಲರೆ ಅಂಗಡಿಗಳು ವ್ಯಾಪಾರಿಗಳು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಇನ್ನೂ ಕೆಲವರು ಪ್ರತಿ ಗ್ರಾಂ ಚಿನ್ನದ ಮೇಲೆ ೫೦೦ ರಿಯಾಯಿತಿಯನ್ನು ನೀಡಿ ಅಕ್ಷಯ ತೃತೀಯಂದು ವ್ಯಾಪಾರ ವಹಿವಾಟು ಗರಿಷ್ಠ ಪ್ರಮಾಣದಲ್ಲಿ ನಡೆಸಲು ಯೋಜನೆ ರೂಪಿಸಿದ್ದಾರೆ. ೫೦ ಸಾವಿರ ರೂಪಾಯಿ ಮೌಲ್ಯದ ಚಿನ್ನ ಖರೀದಿಯ ಮೇಲೆ ಗ್ರಾಹಕರಿಗೆ ಬೆಳ್ಳಿಯ ವಿಗ್ರಹವನ್ನು ಉಚಿತವಾಗಿ ಪಡೆಯಲಿದ್ದಾರೆ. ಅಯೋಧ್ಯೆಯ ರಾಮ ದೇವಾಲಯದಲ್ಲಿ ಈ ವಿಗ್ರಹವನ್ನು ಪಡೆಯಲಾಗಿದೆ ಎಂದು ಹೇಳುತ್ತಿದ್ದಾರೆ.
ಯುಎಸ್‌ಎ-ಚೀನಾ ವ್ಯಾಪಾರ ಯುದ್ಧಗಳಿಂದಾಗಿ, ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಆಟೋಮೊಬೈಲ್ ಉದ್ಯಮ ಅಥವಾ ಷೇರು ಮಾರುಕಟ್ಟೆಗಿಂತ ಹೆಚ್ಚು, ಚಿನ್ನವು ಹೆಚ್ಚು ಲಾಭದಾಯಕವಾಗಿದೆ. ಆದ್ದರಿಂದ, ಎಲ್ಲರೂ ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ಬೆಲೆ ಏರಿಕೆಯ ನಂತರ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಕಾರಣ ನಗರದಾದ್ಯಂತ ಹಲವಾರು ಮಾರಾಟಗಾರರು ಹಗುರವಾದ ಆಭರಣಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಹೆಚ್ಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಹಗುರವಾದ ಆಭರಣಗಳನ್ನು ಖರೀದಿಸಲು ಗ್ರಾಹಕರಿಗೆ ಆದ್ಯತೆ ನೀಡಲಾಗುತಿದೆ. ಇದರಿಂದ ೧೮ ಕ್ಯಾರೆಟ್ ಚಿನ್ನದ ಆಭರಣಗಳ ಮಾರಾಟವು ಹೆಚ್ಚಾಗುತ್ತಿದೆ ಎಂದು ಚಿನ್ನದ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಸಣ್ಣ ವ್ಯವಹಾರಗಳ ಮೇಲೆ ಪರಿಣಾಮ
ಹತ್ತು ಗ್ರಾಂಗೆ ಲಕ್ಷ ರೂ.ದಾಟುತ್ತಿರುವ ಪರಿಣಾಮ ಚಿನ್ನದ ಉದ್ಯಮದಲ್ಲಿನ ಸಣ್ಣ ವ್ಯವಹಾರಗಳ ಮೇಲೆ ಭಾರಿ ಪರಿಣಾಮ ಬೀರಿದೆ. ದೈನಂದಿನ ವಸ್ತುಗಳ ಬೆಲೆ, ಅಂಗಡಿ-ಮುಗ್ಗಟ್ಟುಗಳ ಬಾಡಿಗೆ, ಕಾರ್ಮಿಕರ ವೇತನ ಸೇರಿದಂತೆ ಇತರೆ ಸಮಸ್ಯೆಗಳನ್ನು ಸಣ್ಣ ವ್ಯಾಪಾರಿಗಳ ಮೇಲೆ ಬಿದ್ದಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಿಂದಾಗಿ ಸಾಮಾನ್ಯವಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆ ಕಾಣುತ್ತವೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆ ಕೂಡ ಕೆ.ಜಿಗೆ ಲಕ್ಷ ರೂ.ದಾಟುತ್ತಿದೆ. ಇದರಿಂದ ಸಾಮಾನ್ಯ ವರ್ಗದ ಜರ ಮೇಲೆ ಪರಿಣಾಮ ಬಿರುತ್ತಿದೆ.