ಅಕ್ರಮ ಮಾದಕ ವಸ್ತು ಸಾಗಾಟ: ಕಾಲಿಗೆ ಗುಂಡಕ್ಕಿ ಬಂಧಿಸಿದ ಪೊಲೀಸರು

0
16

ಕಲಬುರಗಿ: ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ನಗರದ ತಾವರಗೇರ ಕ್ರಾಸ್ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಆರೋಪಿ ಸುಪ್ರೀತ್ ಶೀತಲ್ ಕುಮಾರ್ ನವಲೇ (32) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಇಂದು ಬೆಳಗ್ಗೆ ಪೊಲೀಸರು ತಾವರಗೇರ ಕ್ರಾಸ್ ಸಮೀಪ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಆ ರಸ್ತೆಯಾಗಿ ಬಂದ ಶಂಕಿತ ಕಾರೊಂದನ್ನು ತಪಾಸಣೆ ಮಾಡುತ್ತಿದ್ದ ವೇಳೆ ಅದರಲ್ಲಿದ್ದ ಆರೋಪಿ ಸುಪ್ರೀತ್ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಚೌಕ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ರಾಘವೇಂದ್ರ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಗುರುಮೂರ್ತಿಯವರ ಎಡಗೈಗೆ ಗಾಯವಾಗಿದೆ. ಗುರುಮೂರ್ತಿ ಹಾಗೂ ಆರೋಪಿಯನ್ನು ನಗರದ ಜಿಮ್ಸ್ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ಭೇಟಿ ನೀಡಿದರು.

ಆರೋಪಿಯ ಕಾರಿನಲ್ಲಿ ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Previous articleಪ್ರತಿ ಸೋಮವಾರ ನಮ್ಮ ಮೆಟ್ರೋ ರೈಲಿನ ಸಮಯದಲ್ಲಿ ಬದಲಾವಣೆ
Next articleಲ್ಯಾಪ್‌ಟಾಪ್‌ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಭಾರತದಲ್ಲಿ ನಿರ್ಮಾಣ