ಅಕ್ರಮ ಮರಳುಗಾರಿಕೆ, ಅಕ್ರಮ ಬಾಕ್ಸೈಟ್ ಘಟಕಕ್ಕೆ ದಿಢೀರ್‌ ದಾಳಿ

0
26

ಬಂಟ್ವಾಳ: ಅಕ್ರಮ ಮರಳುಗಾರಿಕೆ ಹಾಗೂ ಬಾಕ್ಸೈಟ್ ಘಟಕಕ್ಕೆ ಬಂಟ್ವಾಳ ತಹಶೀಲ್ದಾರ್ ಅವರ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿ, ಪ್ರಕರಣ ದಾಖಲಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ‌ ಗ್ರಾಪಂ ಪಿಡಿಒಗೆ ಹಸ್ತಾಂತರಿಸಲಾಗಿದೆ.
ಬಂಟ್ವಾಳ ತಾಲೂಕಿನ ಕುಡ್ತಮುಗೇರು ಹಾಗೂ ಗಡಿಪ್ರದೇಶವಾದ ಕನ್ಯಾನದ ಪಾದೆಕಲ್ಲು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮತ್ತು ‌ಬಾಕ್ಸೈಟ್ ಅಡ್ಡೆಗೆ ಬೆಳಗಿನ ಜಾವ ಸುಮಾರು 7ಗಂಟೆ ಹೊತ್ತಿಗೆ ತಹಶೀಲ್ದಾರ್ ಡಿ.ಅರ್ಚನಾ ಭಟ್ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಹಠಾತ್ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.
ಕುಡ್ತಮುಗೇರುವಿನಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ಮರಳುಗಾರಿಕೆಯ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ಸುಮಾರು 30ಕ್ಕೂ ಅಧಿಕ ಪಿಕಪ್‌ನಷ್ಟು ಲೋಡ್ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮರಳಿನ ರಾಶಿ ಹಾಗೂ ಸ್ಥಳದಲ್ಲಿ ಮರಳು ತೆಗೆಯಲೆಂದು ಉಪಯೋಗಿಸಲಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಈ ಸಂದರ್ಭ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕೊಳ್ನಾಡು ಗ್ರಾಮ ಪಂಚಾಯತ್ ಪಿಡಿಒ ಅವರಿಗೆ ತಹಶೀಲ್ದಾರ್ ಅರ್ಚನಾ ಭಟ್ ಅವರು ಸೂಚಿಸಿ ಸೊತ್ತುಗಳನ್ನು ಪಿಡಿಒ ಸುಪರ್ದಿಗೆ ಹಸ್ತಾಂತರಿಸಿದ್ದಾರೆ.
ತದನಂತರ ಖಚಿತ ವರ್ತಮಾನವನ್ನಾಧರಿಸಿ ತಾಲೂಕಿನ ಗಡಿಭಾಗ ಕನ್ಯಾನದ ಪಾದೆಕಲ್ಲು ಎಂಬಲ್ಲಿ ಬೃಹತ್ ಮಟ್ಟದಲ್ಲಿ ಅಕ್ರಮವಾಗಿ ಬಾಕ್ಸೈಟ್ ದಂಧೆ ನಡೆಯುತ್ತಿರುವ ದೂರಿನ ಹಿನ್ನೆಲೆಯಲ್ಲಿ ಇದೇ ಅಧಿಕಾರಿಗಳ ತಂಡ ಸ್ಥಳಕ್ಕೆ ದಾಳಿ ನಡೆಸಿದೆ.
ಈ ಘಟಕದ ದಾಖಲೆ ಪತ್ರಗಳನ್ನು ಕಂದಾಯ ಇಲಾಖೆಗೆ ಸಲ್ಲಿಸುವಂತೆ ತಹಶೀಲ್ದಾರ್ ಅರ್ಚನಾ ಭಟ್ ಅವರು ಬಾಕ್ಸೈಟ್ ಘಟಕದ ಮಾಲೀಕರಿಗೆ ಸೂಚಿಸಿದ್ದು, ಮುಂದಿನ ತನಿಖೆಗಾಗಿ ಈ ಪ್ರಕರಣವನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ
ವಿಟ್ಲ ಕಂದಾಯ ಅಧಿಕಾರಿ ರವಿ ಎಂ.ಎನ್‌, ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ನಾಯಕ್, ಗ್ರಾಮ ಸಹಾಯಕಾದ ಗಿರೀಶ್ ಶೆಟ್ಟಿ, ರುಕ್ಮಯ್ಯ ಮೂಲ್ಯ, ಲಿಂಗಪ್ಪ ಗೌಡ ಈ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Previous articleಶಾಸಕರ ಕಚೇರಿಗೆ ಕನ್ನ!
Next articleಒಂಟಿ ಮಹಿಳೆ ಇದ್ದ ಬಟ್ಟೆ ಅಂಗಡಿಗೆ ನುಗ್ಗಿ ದರೋಡೆ