ಹುಬ್ಬಳ್ಳಿ: ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಮಳಿಗೆಯನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ನ ಸಿಸಿಬಿ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಮಳಿಗೆ ಮೇಲೆ ದಿಢೀರ್ ದಾಳಿ ನಡೆಸಿದ್ದು, ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುತ್ತಾರೆ.
ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿ ನಂತರ ಅದನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದ ಆರೋಪಿ ಸಿಸಿಬಿ ತಂಡದ ಕೈಗೆ ಸಿಕ್ಕಿ ಬಿದ್ದಿದ್ದು, ದಾಳಿ ವೇಳೆ ಒಟ್ಟು 4,42,000 ರೂ ಮೌಲ್ಯದ 130 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.