ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ ಒಟ್ಟಿಗೆ ಸಭೆಯೊಂದರಲ್ಲಿ ಅಕ್ಕ-ಪಕ್ಕ ಕುಳಿತುಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಯಿತು.
ಇಂದು ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಶತಮಾನೋತ್ಸವ ಮರು ಕಾರ್ಯಕ್ರಮದ ಸಿದ್ದತೆ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ ಅಕ್ಕ-ಪಕ್ಕ ಕುಳಿತು ಗಮನಸೆಳೆದರು.
ಒಂದೇಡೆ ರಾಜ್ಯದ ʻಕೈʼ ಪಾಳೆಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಬಿರುಗಾಳಿಯಂತೆ ಹಬ್ಬುತ್ತಿದ್ದರೆ, ಇನ್ನೊಂದೆಡೆ ಕೈ ನಾಯಕರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ʻಗಾಂಧಿ ಭಾರತ’ಕ್ಕೆ ಮರು ಚಾಲನೆ ನೀಡಲು ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ ಒಟ್ಟಿಗೆ ಸಭೆಯಲ್ಲಿ ಪಾಲ್ಗೊಂಡು ಅಕ್ಕ-ಪಕ್ಕ ಕುಳಿತು ಚರ್ಚೆ ನಡೆಸಿರುವುದು ಎಲ್ಲರ ಹುಬ್ಬೆರಿಸುವಂತೆ ಮಾಡಿತು.
ಸಭೆಯಲ್ಲಿ ಸಚಿವರಾದ ಆರ್.ಬಿ ತಿಮ್ಮಾಪುರ, ಬೋಸ್‌ರಾಜು, ಶಾಸಕರಾದ ಲಕ್ಷ್ಮಣ್ ಸವದಿ, ರಾಜು ಕಾಗೆ, ಬಾಬಾಸಾಹೇಬ್ ಪಾಟೀಲ್, ವಿಶ್ವಾಸ ವೈದ್ಯ, ಎಂಎಲ್ಸಿ ಪ್ರಕಾಶ್ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ ಸೇರಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ನಾಯಕರು ಇದ್ದರು.